ಹೊಳೆನರಸೀಪುರದ ವಾಸ್ತು, ದಿಕ್ಕು-ದೆಸೆ ಬದಲಾಗಿದೆ; ಒಂದೇ ವೇದಿಕೆಯಲ್ಲಿ ಶ್ರೇಯಸ್ ಪಟೇಲ್-ಪ್ರೀತಂಗೌಡ

ಹೊಳೆನರಸೀಪುರ: ಈ ವರ್ಷ ಹೊಳೆನರಸೀಪುರ ತಾಲೂಕಿನ ವಾಸ್ತು,ದಿಕ್ಕು-ದೆಸೆ ಬದಲಾಗಿದೆ. ಇದರ ಶ್ರೇಯಸ್ಸು ಸಂಸದ ಶ್ರೇಯಸ್ ಪಟೇಲ್ ಅವರಿಗೆ ಸಲ್ಲಬೇಕು ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಹೇಳಿದರು.

ಪಟ್ಟಣದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ಮುಂಭಾಗ ಭಾನುವಾರ ಮುಸ್ಸಂಜೆ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಯುವಕರ ಸಂಘ ಏರ್ಪಡಿಸಿದ್ದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪಟ್ಟಣದಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾಗಿದೆ. ಹಿಂದೆ ಯಾವುದೇ ಸಮಾರಂಭ ಆಯೋಜನೆಯಾದರೂ ಪಟ್ಟಣದ ಯಾವುದೋ ಮನೆ ಅಥವಾ ತೋಟದ ಮೂಲೆಯಲ್ಲಿ ವಿದ್ಯುತ್ ದೀಪಗಳು ಉರಿಯುತ್ತಿದ್ದವು. ಆದರೆ ಇಂದು ಪಟ್ಟಣವೆಲ್ಲ ಬೆಳಕಾಗಿದೆ. ದೀಪಾಲಂಕಾರ ಪಟ್ಟಣಕ್ಕೆ ಹೊಸ ಮೆರಗನ್ನು ತಂದಿದೆ ಎಂದರು.

ಈಗ ಶ್ರೇಯಸ್ ಅವರ ತಾತನ ಕಾಲ, ದಿವಂಗತ ಜಿ ಪುಟ್ಟಸ್ವಾಮಿಗೌಡರ ಅವಧಿ ಮರುಕಳಿಸುತ್ತಿದೆ. ಸಹೋದರ ಶ್ರೇಯಸ್ ಪಟೇಲ್ ಅವರಲ್ಲಿ ತಾಲೂಕಿನ ಶ್ರೇಯಸ್ಸು ಅಡಗಿದೆ. ನಾನೊಂದು ಪಕ್ಷದ ಪ್ರಮುಖ ಹುದ್ದೆಯಲ್ಲಿದ್ದೇನೆ. ಅವರು ಒಂದು ಪಕ್ಷದ ಸಂಸದರಾಗಿದ್ದಾರೆ. ಆದರೆ ರಾಜಕಾರಣದಲ್ಲಿ ಮಾನವೀಯತೆ ಮುಖ್ಯ. ನಾವು ಯಾವ ಪಕ್ಷದಲ್ಲಿಯೇ ಇದ್ದರೂ ಶ್ರೇಯಸ್ ಪಟೇಲರ ಬೆಳವಣಿಗೆಯನ್ನು ಬೆಂಬಲಿಸುತ್ತೇನೆ ಎಂದು ನುಡಿದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸುತ್ತಿರುವುದರ ಮೆರೆಗನ್ನು ನೋಡಿದರೆ ಪಟ್ಟಣದ ಜನತೆಗೆ ಸ್ವತಂತ್ರ ಸಿಕ್ಕಿದೆ ಎಂದೆನಿಸುತ್ತಿದೆ. ಎಲ್ಲಿ ತನಕ ಶ್ರೇಯಸ್ ಪಟೇಲ್ ಅವರಿಗೆ ಅಧಿಕಾರ ನೀಡುತ್ತೀರೋ ಅಲ್ಲಿಯವರೆಗೂ ಇದೇ ರೀತಿ ಭಾಗವಹಿಸುತ್ತೇನೆ ಎಂದು ತಿಳಿಸಿದರು.

ಸಂಸದ ಶ್ರೇಯಸ್ಎಂ. ಪಟೇಲ್ ಮಾತನಾಡಿ,ನಮ್ಮ ಪಟ್ಟಣದ ಕಾರ್ಯಕ್ರಮಕ್ಕೆ ಪ್ರೀತಂ ಅಣ್ಣನವರು ಆಗಮಿಸಿರುವುದು ಹೆಮ್ಮೆ ಹಾಗೂ ಸಂತಸ ತಂದಿದೆ. ಅವರು ನಮ್ಮ ಪತ್ನಿಯ ಸಂಬಂಧಿಕರೂ ಆಗಿರುವುದರಿಂದ ನಮ್ಮ ಬಾಂಧವ್ಯ ಚೆನ್ನಾಗಿದೆ ಎಂದರು.

ಇದೇ ಮೊದಲ ಬಾರಿಗೆ ಪಟ್ಟಣದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಶ್ರೇಯಸ್ ಎಂ.ಪಟೇಲ್ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಅವರು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಭದ್ರಕೋಟೆಯಲ್ಲಿ ಒಟ್ಟಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಶ್ರೇಯಸ್ ಹಾಗೂ ಪ್ರೀತಮ್ ಗೌಡ ಅವರು ಕನ್ನಡಾಂಬೆಯ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.