ಪುತ್ರ ಪ್ರಜ್ವಲ್ ಜಯಭೇರಿಗಾಗಿ ಲಕ್ಷ್ಮೀನರಸಿಂಹಸ್ವಾಮಿ ಬಳಿ ಪ್ರಾರ್ಥಿಸಿದ ಎಚ್.ಡಿ.ರೇವಣ್ಣ

ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದಲ್ಲಿ ಭಾಗಿಯಾದ ರೇವಣ್ಣ ಕುಟುಂಬ

ಹಾಸನ; ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್‌ ಅವರಿಗೆ ಎಲ್ಲರೂ ಮತ ಕೊಡಲಿ ಎಂದು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬಳಿ ಪ್ರಾರ್ಥಿಸಿದ್ದೇನೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹ ರಥೋತ್ಸವದಲ್ಲಿ ಭಾಗಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರತಿ ವರ್ಷ ರಥೋತ್ಸವದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸುತ್ತೇವೆ. ರಾಜ್ಯದ ಜನತೆಗೆ ಒಳ್ಳೆಯದಾಗಲಿ, ಒಳ್ಳೆಯ ಮಳೆ, ಬೆಳೆ ಆಗಲಿ, ರೈತರಿಗೆ ಆರೋಗ್ಯ ಕೊಡಲಿ. ಚುನಾವಣೆ ಸಂದರ್ಭ ಒಳ್ಳೆಯ ಕೆಲಸ ಮಾಡುವ ಶಕ್ತಿ ಕೊಡಲಿ‌ ಎಂದು ಬೇಡಿದ್ದೇನೆ.

ಪ್ರಜ್ವಲ್‌ ಅವರಿಗೆ ಎಂಟು ವಿಧಾನಸಭಾ ಕ್ಷೇತ್ರದಿಂದ ಅದ್ಭುತವಾದ ಲೀಡ್ ಬಂದು ಅತಿ ಹೆಚ್ಚಿನ ಮತಗಳಿಂದ ಗೆಲ್ಲಬೇಕು, ಕುಮಾರಸ್ವಾಮಿ ಅವರು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ದೇವರಲ್ಲಿ ಕೇಳಿದ್ದೇನೆ ಎಂದರು.

ಕುಮಾರಸ್ವಾಮಿ ಅವರಿಗೆ ಆರೋಗ್ಯ ಕೊಡಲಿ, ಹಾಸನ, ಮಂಡ್ಯ, ಕೋಲಾರ ಮೂರು ಕ್ಷೇತ್ರಗಳು ಗೆಲ್ಲಬೇಕು. ನಮ್ಮವೂ ಮೂರು ಸೇರಿ 28 ಕ್ಕೆ 28 ಗೆದ್ದು ಮೋದಿಯವರು ಪ್ರಧಾನಮಂತ್ರಿ ಆಗಲಿ ಎಂದು ಲಕ್ಷ್ಮೀನರಸಿಂಹ ಸ್ವಾಮಿಯಲ್ಲಿ ಕೇಳಿದ್ದೇನೆ ಎಂದರು.

ಎಚ್.ಡಿ‌.ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸುವ ಬಗ್ಗೆ ನನಗೆ ಗೊತ್ತಿಲ್ಲ, ಅವರು ಇವತ್ತು ಆಸ್ಪತ್ರೆಯಿಂದ ಬರುತ್ತಾರೆ ಎಂದರು.