ಹಾರ-ತುರಾಯಿ ಹಾಕಬೇಡಿ, ಪಟಾಕಿ ಸಿಡಿಸಬೇಡಿ: ಹಾಸನಕ್ಕೆ ಆಗಮಿಸುತ್ತಿರುವ ಎಚ್.ಡಿ. ರೇವಣ್ಣ ಮನವಿ

ಜಾಮೀನು ಪಡೆದ ನಂತರ‌ ಮೊದಲ ಬಾರಿ ಹಾಸನ ಜಿಲ್ಲೆಗೆ ಆಗಮಿಸುತ್ತಿರುವ ಮಾಜಿ ಸಚಿವ

ಹಾಸನ: ಅತ್ಯಾಚಾರ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದಿರುವ ಮಾಜಿಸಚಿವ ಎಚ್.ಡಿ.ರೇವಣ್ಣ ಜಿಲ್ಲೆಗೆ ಆಗಮಿಸುತ್ತಿದ್ದು, ಹಾರ, ತುರಾಯಿ ಹಾಕಬೇಡಿ ಹಾಗೂ ಪಟಾಕಿ ಸಿಡಿಸಬೇಡಿ ಎಂದು ಜೆಡಿಎಸ್‌ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ರೇವಣ್ಣ ಮನವಿ ಮಾಡಿದ್ದಾರೆ.

ರೇವಣ್ಣ ಮನವಿಯ ಪೂರ್ಣಪಾಠ ಇಂತಿದೆ:
ಹಾಸನ ಜಿಲ್ಲೆಯ ನನ್ನೆಲ್ಲಾ ಅಭಿಮಾನಿಗಳೇ, ನನ್ನ ಪಕ್ಷದ ಶಾಸಕರೇ, ಎಲ್ಲಾ ಚುನಾಯಿತ ಪ್ರತಿನಿಧಿಗಳೇ
ನಿಮ್ಮೆಲ್ಲರ ಪ್ರೀತಿ, ಹಾರೈಕೆಯಿಂದ ನಾನು ಜಾಮೀನು ಪಡೆದು ಬಿಡುಗಡೆ ಆಗಿದ್ದೇನೆ.

ನಾನು ಘನ ನ್ಯಾಯಾಲಯದ ತೀರ್ಪು, ಆದೇಶಕ್ಕೆ ಗೌರವ ಕೊಡುತ್ತೇನೆ, ಕಡೆವರೆಗೂ ಅದನ್ನು ಪಾಲಿಸುತ್ತೇನೆ. ಇದಕ್ಕೆಲ್ಲಾ ನಿಮ್ಮಗಳ ಪ್ರೀತಿ, ಪ್ರಾರ್ಥನೆಯೇ ಕಾರಣ, ಜೊತೆಗೆ ತಂದೆ ತಾಯಿ, ದೇವರು ಕಾರಣ.

ನಿಮ್ಮ ಈ ಋಣವ ನಾನೆಂದೂ ಮರೆಯಲಾರೆ. ಕೆಲ ದಿನಗಳ ನಂತರ ಬುಧವಾರ ಬೆಳಗ್ಗೆ ನಾನು ನನ್ನ ತವರು ಜಿಲ್ಲೆಗೆ ಆಗಮಿಸುತ್ತಿದ್ದೇನೆ. ಯಾರೂ ಕೂಡ ಹಾರ-ತುರಾಯಿ ಹಾಕುವುದಾಗಲೀ, ಪಟಾಕಿ ಸಿಡಿಸುವುದಾಗಲಿ ಮಾಡಬಾರದು ಎಂದು ಈ ಮೂಲಕ ಮನವಿ ಮಾಡುತ್ತೇವೆ.