ಲೋಕಸಭೆ ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯ ಅವರನ್ನು ಇಳಿಸ್ತೀನಿ ಅಂತ ಡಿಕೆಶಿ ಹೇಳಿದ್ದಾರೆ; ಎಚ್.ಡಿ.ರೇವಣ್ಣ ಬಾಂಬ್!

ಸಿದ್ದರಾಮಯ್ಯ ಹೊಳೆನರಸೀಪುರಕ್ಕೆ ಬಂದಿದ್ದಕ್ಕೆ ಎಷ್ಟು ಮತ ಬರ್ತಾವೆ ಅಂತ ಜೂನ್ 4ರಂದು ತಿಳಿಯುತ್ತದೆ

ಹಾಸನ: ಲೋಕಸಭೆ ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿಯಲ್ಲಿ ಇರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಮೈಸೂರಿನಲ್ಲಿ ಹೇಳಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೊಸ ಬಾಂಬ್ ಸಿಡಿಸಿದರು.

ಬೇಲೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಮುಗಿದ ಮೇಲೆ‌ ಗ್ಯಾರೆಂಟಿಗಳೂ ಇರಲ್ಲ. ಇವರ ಸರ್ಕಾರವೇ ಇರಲ್ಲ ಇನ್ನೂ ಗ್ಯಾರೆಂಟಿ ಇರುತ್ತಾ? ಎಂದು ಪ್ರಶ್ನಿಸಿದರು.

ಮೈಸೂರಿನಲ್ಲಿ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಖಾಲಿ ಮಾಡಿಸ್ತೀವಿ ಎಂದು ಡಿ.ಕೆ.ಶಿವಕುಮಾರ್ ಮೈಸೂರಿನ ಅವರ ಬೀಗರ ಊರಿನಲ್ಲಿ ಹೇಳಿದ್ದಾರೆ ಎಂದರು.

ಚುನಾವಣೆ ಮುಗಿದ ತಕ್ಷಣ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದಿಲ್ಲ. ಮೂರು ಕಡೆ ಜೆಡಿಎಸ್, ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಗೆಲ್ಲಲ್ಲ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,‌ ಡಿಕೆಶಿ ಜ್ಯೋತಿಷ್ಯ ಹೇಳೋದು ಯಾವಾಗ ಕಲಿತರು?
ಕೇರಳಕ್ಕೆ ಹೋಗಿದ್ದರಲ್ಲಾ ಜ್ಯೋತಿಷ್ಯ ಕೇಳಲು ಅಲ್ಲಿ ಕಲಿತರೇ ಎಂದರು.

ಮೊದಲು ಅವರ ರಾಹುಲ್‌ಗಾಂಧಿ ಅವರನ್ನು ಗೆಲ್ಲಿಸಿಕೊಳ್ಳಲಿ. ಅವರು ಉತ್ತರ ಭಾರತ ಬಿಟ್ಟು ಕೇರಳಕ್ಕೆ ಯಾಕೆ ಬಂದರು?
ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಏಕೆ ಸೋತರು? ಬಾದಾಮಿಯಲ್ಲಿ ಎಷ್ಟು ಲೀಡ್ ಬಂತು? ಜಿಲ್ಲೆಯ ಜನ ತೀರ್ಮಾನ ಮಾಡ್ತಾರೆ ಎಂದರು.

ನಾವು ಜಿಲ್ಲೆಯ ಜನರ ಸೇವೆ ಮಾಡಿದ್ದೇವೆ. ಹೊಳೆನರಸೀಪುರ ಜನ ಏನು ತೀರ್ಪು ಕೊಡುತ್ತಾರೆಂದು ನೋಡಲಿ, ಸಿದ್ದರಾಮಯ್ಯ ಬಂದು ಹೋದ ಮೇಲೆ, ಅವರು ಬರದಿದ್ದರೆ ಎಷ್ಟು ಮತಗಳು ಬರುತ್ತಿದ್ದವು ಎಂಬುದು ಜೂ.4 ಕ್ಕೆ ಗೊತ್ತಾಗುತ್ತದೆ ಎಂದರು.

ಜಿಲ್ಲೆಯ ಜನರ ಋಣ ನಮ್ಮ ಮೇಲಿದೆ ಅದನ್ನು ತೀರಿಸಬೇಕು ಎಂದು ನನ್ನ‌ ಮಕ್ಕಳಿಗೂ ಹೇಳಿದ್ದೇನೆ. ಅದನ್ನು ಮಾಡುತ್ತೇವೆ ಎಂದರು.