ಹಾಸನ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ರಾಜ್ಯ ಸರ್ಕಾರದ ಅಸಹಕಾರ, 25ಕೋಟಿ ರೂ. ಬಾಕಿ ಅನುದಾನ ಬಿಡುಗಡೆಗೆ ರೇವಣ್ಣ ಒತ್ತಾಯ: ದುದ್ದ ರೈಲ್ವೆ ಕ್ರಾಸಿಂಗ್ ಗೆ ಅಂಡರ್ ಪಾಸ್ ನಿರ್ಮಾಣ

ಹಾಸನ: ನಗರದ ಹೊಸ ಬಸ್ ನಿಲ್ದಾಣ ರಸ್ತೆ ಫ್ಲೈ ಓವರ್ ಕಾಮಗಾರಿ ಪೂರ್ಣಗೊಳಿಸಲು ತನ್ನ ಪಾಲಿನ ಬಾಕಿ ಹಣವನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ₹98 ಕೋಟಿ ವೆಚ್ಚದ ಯೋಜನೆ ಕಳೆದ 1೦ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ನಾನು ಅಧಿಕಾರಕ್ಕೆ ಬಂದ ನಂತರ ಚಾಲನೆ ನೀಡಿದೆ ಎಂದು ಹೇಳಿದರು.

ಮೊದಲು 2 ಪಥದ ಮೇಲ್ಸೇತುವೆ ಮಾಡಲು ಯೋಜನೆ ರೂಪಿಸಲಾಗಿತ್ತು. ನಂತರ ನಾಲ್ಕು ಪಥ ಮಾಡಲು ನಿರ್ಧರಿಸಲಾಯಿತು ಎಂದರು. ಸದರಿ ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲಿನ 68 ಕೋಟಿ ಕೊಡಬೇಕಿತ್ತು. ನಾನು ಮಂತ್ರಿಯಾಗಿದ್ದಾಗ 18 ಕೋಟಿ ರೂ.ಗಳನ್ನು ಭೂ ಸ್ವಾಧೀನಕ್ಕೆ ಕೊಡಿಸಿದ್ದೆ. ಅದಾದ ಬಳಿಕ 43 ಕೋಟಿ ನೀಡಲಾಗಿತ್ತು. ಇನ್ನೂ 25 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಕೊಡಬೇಕಿದ್ದು, ಕೂಡಲೇ ಅದನ್ನು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

25 ಕೋಟಿ ಕೊಡಲು ಕಳೆದ ಒಂದೂವರೆ ವರ್ಷದಿಂದ ಸತಾಯಿಸುತ್ತಿದೆ. ಒಂದು ವೇಳೆ ರಾಜ್ಯ ಸರ್ಕಾರ ಎಲ್ಲವನ್ನೂ ಗ್ಯಾರಂಟಿಗೆ ಹೂಡಿಕೆ ಮಾಡಿದ್ದೇವೆ, ನಮ್ಮ ಬಳಿ ಹಣ ಇಲ್ಲ, ಕೊಡುವುದಿಲ್ಲ ಎಂದರೆ ಕೇಂದ್ರದ ಮನವೊಲಿಸಿ ನಾವೇ ಕಾಮಗಾರಿ ಮಾಡುತ್ತೇವೆ ಎಂದು ಹೇಳಿದರು.

ಇದೀಗ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಮೇಲ್ಸೇತುವೆ ಕಾಮಗಾರಿ ಸಂಬಂಧ 18 ಕೋಟಿ ಹಾಗೂ ಮತ್ತೊಂದು ಅಂಡರ್ ಪಾಸ್ ನಿರ್ಮಾಣಕ್ಕೆ 5 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ ಎಂದು ರೇವಣ್ಣ ಹೇಳಿದರು.

ರಾಜಕೀಯ ಆಮೇಲೆ ಮಾಡೋಣ, ನನಗೆ ಜಿಲ್ಲೆಯ ಅಭಿವೃದ್ಧಿ ಮುಖ್ಯ. ಇದೇ ರೀತಿ ದುದ್ದ ಬಳಿ ಎರಡು ಪಥದ ಮೆಲ್ಸೇತುವೆ ನಿರ್ಮಾಣಕ್ಕೆ 63.7೦ ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಭವಿಷ್ಯದ ದೃಷ್ಟಿಯಿಂದ 4 ಪಥವಾಗಿ ಬದಲಾಯಿಸಲು ₹15೦ ಕೋಟಿ ಆಗಲಿದ್ದು, ಆ ನಿಟ್ಟಿನಲ್ಲೂ ಯೋಚಿಸಲಾಗುತ್ತಿದೆ ಎಂದರು.

ಹಾಗೆಯೇ ದುದ್ದ-ಹಾಸನ ನಡುವೆ 4 ಪಥದ ರಸ್ತೆ ಮಾಡಲಾಗುವುದು ಎಂದು ತಿಳಿಸಿದರು.
ಮೊಸಳೆ ಹೊಸಹಳ್ಳಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಅಂಡರ್‌ಪಾಸ್ ನಿರ್ಮಿಸಲಾಗುವುದು. ಹಾಸನದ ಡೇರಿ ಬಳಿಯ ಅಂಡರ್ ಪಾಸನ್ನೂ ಅಗಲೀಕರಣ ಮಾಡಲಾಗುವುದು.

ಹಂಗರಹಳ್ಳಿ ಬಳಿ 2 ಪಥದ ಮೇಲ್ಸೇತುವೆಗೆ 29 ಕೋಟಿ ವೆಚ್ಚದ ಟೆಂಡರ್ ಕರೆಯಲಾಗಿದೆ ಎಂದರು. ಹಾಸನ-ಬೇಲೂರು ರೈಲುಮಾರ್ಗ ಭೂ ಸ್ವಾಧೀನ ಯೋಜನೆ ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

ಡಿಸಿ ಅವರು ಸ್ವಚ್ಛತೆ ಶ್ರಮದಾನ ಮಾಡಿ ಫೋಟೋ ತೆಗೆಸಿಕೊಳ್ಳುವುದಲ್ಲ. ಬದಲಾಗಿ ರೈಲ್ವೆ ಮೇಲ್ಸೇತುವೆಗಾಗಿ ಸ್ವಾಧೀನ ಪಡಿಸಿಕೊಂಡಿದ್ದ ಭೂಮಿಗೆ ಪರಿಹಾರ ನೀಡಲಾಗಿದೆ. ಆದರೂ ಒತ್ತುವರಿ ಮಾಡಲಾಗುತ್ತಿದ್ದು, ಅದನ್ನು ಖುಲ್ಲಾ ಮಾಡಿಸಿ ಬೌಂಡರಿ ಲೈನ್ ಫಿಕ್ಸ್ ಮಾಡಿಸಲಿ, ಇಲ್ಲವಾದರೆ ಡಿಸಿ ಅವರೂ ಶಾಮೀಲಾಗಿದ್ದಾರೆ ಎನ್ನುವ ಭಾವನೆ ಬರುತ್ತದೆ ಎಂದು ಎಚ್ಚರಿಸಿದರು.

ಇದೇ ವೇಳೆ ಪ್ಲಾಂಟೇಷನ್ ಜಾಗವನ್ನು ರೈತರಿಗೆ ಗುತ್ತಿಗೆ ನೀಡಲು ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರ ಮಾಡದೆ ಈಗ ಸರ್ಕಾರಕ್ಕೆ ಪತ್ರ ಬರೆದಿರುವ ಡಿಸಿ ಅವರ ಕ್ರಮಕ್ಕೆ ರೇವಣ್ಣ ಅಸಮಾಧಾನ ಹೊರ ಹಾಕಿದರು.

ವಿವಾದಿತ ನಾಗತವಳ್ಳಿ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಪಾರ್ಕ್‌ಗೆ ಜಾಗ ಮೀಸಲು ಇಟ್ಟಿರಲಿಲ್ಲ ಎಂಬುದನ್ನು ಸಾಬೀತು ಮಾಡಿದ್ರೆ ನಾನು ರಾಜಕೀಯದಲ್ಲಿ ಇರಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಪಾರ್ಕ್ ಜಾಗ ಉಳಿಸಬೇಕು.

-ಎಚ್.ಡಿ.ರೇವಣ್ಣ,‌ಮಾಜಿ ಸಚಿವ