ಕಂದಾಯ ಸಚಿವರ ಕಚೇರಿಯಲ್ಲೇ ಪಂಚೆ ಹಾಸಿಕೊಂಡು ಮಲಗ್ತೀನಿ; ಅಧಿಕಾರಿಗಳಿಗೆ ರೇವಣ್ಣ ಎಚ್ಚರಿಕೆ

ನನಗೇನು ಯಾರ ಹಂಗಿಲ್ಲ, ಇಪ್ಪತ್ತೈದು ವರ್ಷ ಎಂಎಲ್‌ಎ ಆಗಿ ಕೆಲಸ ಮಾಡಿದ್ದೀನಿ. ಇತಂಹದ್ದಕ್ಕೆಲ್ಲಾ ನಾನು ಹೆದರಲ್ಲ

ಹಾಸನ: ಹೇಮಾವತಿ, ಯಗಚಿ ಜಲಾಶಯಗಳ ಮುಳುಗಡೆ ನಿರಾಶ್ರಿತರಿಗೆ ನಿವೇಶನ ಹಕ್ಕುಪತ್ರ ಹಂಚಿಕೆ ಮಾಡಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿ.ಪಂ. ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ಮುಂದುವರಿದ ದಿಶಾ ಸಭೆಯಲ್ಲಿ ನಿವೇಶನಗಳನ್ನು ಸಹಾಯಕ ಇಂಜಿನಿಯರ್ ವಿತರಿಸಬೇಕು ಅದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಉತ್ತರಕ್ಕ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮನೆಗಳನ್ನು ನೀಡಲು ನಿಮಗೇನು ಕಷ್ಟ? ಈ ವಿಚಾರವನ್ನು ನಾಳೆ ಅಸೆಂಬ್ಲಿಯಲ್ಲಿ ಪ್ರಸ್ತಾಪ ಮಾಡ್ತೇನೆ. ನನಗೇನು ಯಾರ ಹಂಗಿಲ್ಲ, ಇಪ್ಪತ್ತೈದು ವರ್ಷ ಎಂಎಲ್‌ಎ ಆಗಿ ಕೆಲಸ ಮಾಡಿದ್ದೀನಿ. ಇತಂಹದ್ದಕ್ಕೆಲ್ಲಾ ನಾನು ಹೆದರಲ್ಲ ಎಂದರು.

ಸಚಿವ ಕೃಷ್ಣೇಭೈರೇಗೌಡ ಅವರ ಆಫೀಸ್‌ನಲ್ಲಿ ಧರಣಿ ಕೂರ್ತಿನಿ, ಅಲ್ಲೇ ಪಂಚೆ ಹಾಸಿಕೊಂಡು ಮಲಗುತ್ತೀನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಭೂಸ್ವಾಧೀನ ಅಧಿಕಾರಿ ಮಂಜುನಾಥ್, ಸರ್ ನಿಮಗೂ ನಿಮ್ಮ ಪಿಎ ಅವರಿಗೆ ಈ ಬಗ್ಗೆ ಲೆಟರ್ ಕೊಟ್ಟಿದ್ದೀನಿ, ಎಇ ಅವರಿಗೂ ಲೆಟರ್ ಕೊಟ್ಟಿದ್ದೀನಿ ಎಂದಿದ್ದಲ್ಲದೆ ಅಲ್ಲೇ ಇದ್ದ ಎಇಒ ಮಹೇಶ್ ಅವರ ಕಡೆಗೆ ತಿರುಗಿ ರೀ ಸ್ವಾಮಿ ಹೇಳ್ರಿ ನೀವು ಎಂದರು.

ನಮಗೆ ಲೆಟರ್ ಕೊಟ್ಟಿದ್ದಾರೆ ಅಷ್ಟೇ ಭೂಮಿಗೆ ಮಾತ್ರ ನಮ್ಮ ಸ್ವಾಧೀನದಲ್ಲಿರುತ್ತೆ ನಿವೇಶನಗಳನ್ನು ಕೊಡುವ ಅಧಿಕಾರ ನಮಗಿಲ್ಲ ಎಂದ ಮಹೇಶ್ ಉತ್ತರಿಸಿದ್ದರಿಂದ‌ ಇಬ್ಬರು ಅಧಿಕಾರಗಳ ನಡುವೆ ವಾಗ್ವಾದ ನಡೆಯಿತು.

ಆಗ ಮಧ್ಯಪ್ರವೇಶಿಸಿದ ಮಾಜಿಸಚಿವ ಎಚ್.ಡಿ.ರೇವಣ್ಣ, ಎಸ್‌ಎಲ್‌ಓ ಮಂಜುನಾಥ್ ಅವರಿಗೆ ಮಾಹಿತಿ ಕೊರತೆ ಇದೆ. ಬರೀ ಮುಳುಗಡೆ ಅಂತ ಬರುವವರಿಗೆ ಆಫೀಸ್‌ನಲ್ಲಿ ಕುಳಿತು ಮನೆ ನಿವೇಶನ ಕೊಡೋದೇ ಅವರ ಕೆಲಸ.

ನಾನು ಅಸೆಂಬ್ಲಿಯಲ್ಲಿ ನಾಳೆ ಪ್ರಸ್ತಾಪ ಮಾಡ್ತಿನಿ, ಆಗ ಉತ್ತರ ಕೊಡಬೇಕಲ್ಲ, ಬಡವರಿಗೆ ನಿವೇಶನಗಳನ್ನು ಕೊಡದೆ ಹೋದರೆ ಹೇಗೆ? ಎಂದರು.