ಕಾಂಗ್ರೆಸ್ ಟಿಕೆಟ್ ಪಡೆಯಲು ಎ.ಟಿ.ರಾಮಸ್ವಾಮಿ ಅವರಿಂದ ನಮ್ಮ ಕುಟುಂಬದ ವಿರುದ್ಧ ಪ್ರತಿಭಟನೆ; ಎಚ್.ಡಿ.ರೇವಣ್ಣ ಆರೋಪ

ನಮ್ಮ ಕುಟುಂಬ ಬೇನಾಮಿ ಆಸ್ತಿ ಹೊಂದಿದ್ದರೆ ಅದನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಸವಾಲು ಹಾಕಿದ ರೇವಣ್ಣ; ಕಾನೂನು ಕ್ರಮದ ಎಚ್ಚರಿಕೆ

ಹಾಸನ: ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಲೋಕಸಭಾ ಚುನಾವಣೆಯ ಲಾಭ ಪಡೆಯಲು ನಮ್ಮ ಕುಟುಂಬದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.

ಹಾಸನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆಯಲು ಯತ್ನಿಸುತ್ತಿರುವ ರಾಮಸ್ವಾಮಿ, ಕಾಂಗ್ರೆಸ್ ನಾಯಕರ ಒಲವು ಗಳಿಸಲು ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ವರ್ಷದ ಹಿಂದೆ ನಡೆದಿದೆ ಎಂದು ಆರೋಪಿಸುವ ಘಟನೆ ಹಿಡಿದುಕೊಂಡು ಈಗ ಬಂದಿದ್ದಾರೆ. ನಮ್ಮ ಕುಟುಂಬ ಬೇನಾಮಿ ಆಸ್ತಿ ಹೊಂದಿದ್ದರೆ ಅದನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಸವಾಲು ಹಾಕಿದರು.

ಟಿವಿಯಲ್ಲಿ ಬಂದಿದ್ದನ್ನು ನೋಡಿ ಅವರನ್ನು ಕರೆಯಿಸಿಕೊಂಡೆ ಅನ್ನುತ್ತಾರೆ. ನಾನು ಜಿಲ್ಲೆಯಲ್ಲಿ ಯಾರ ಮೇಲೆ ದೌರ್ಜನ್ಯ ಮಾಡಿದ್ದೇನೆ, ಯಾವ ಆಸ್ತಿ ಒಡೆಸಿದ್ದೇನೆ. ಅವರು ಹೇಗೆ ಮೆರವಣಿಗೆ ಮಾಡಿಸಿದರು, ಎಲ್ಲಿಂದ ಜನ ಕರೆತಂದರು ಎಲ್ಲ ಗೊತ್ತಿದೆ. ಇದೆಲ್ಲ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ.

ಚುನಾವಣೆ ಮೂರು ತಿಂಗಳಿರುವಾಗ ಇಂತಹ ಅಪಪ್ರಚಾರ ಮಾಡಿಸಿದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಾನು ರಾಜ್ಯದ ಯಾವ ಮೂಲೆಯಲ್ಲೂ ಒಂದು ನಿವೇಶನ ಪಡೆದಿಲ್ಲ. ಯಾವುದೇ ಆರೋಪದ ಬಗ್ಗೆಯೂ ಸರ್ಕಾರ ತನಿಖೆ ಮಾಡಿಸಲಿ. ಪ್ರತಿಭಟನೆ ಮಾಡಲು ಬಂದವರಿಗೆ ಬಸ್ ಮಾಡಿಕೊಟ್ಟವರು ಯಾರು? ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಒಳ‌ ಒಪ್ಪಂದ ಆಗಿದೆಯೇ ಅನ್ನುವುದನ್ನು ತಿಳಿಸಲಿ ಎಂದರು.