ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ಹಣ ಬಿಡುಗಡೆ ಮಾಡದ ಡಿಸಿ; ಆಫೀಸ್ ಮುಂದೆ ಪಂಚೆ ಹಾಸಿಕೊಂಡು ಮಲಗುತ್ತೇನೆ ಅಂತ ಹೇಳಿ ಬಂದಿದ್ದೇನೆ; ಎಚ್.ಡಿ.ರೇವಣ್ಣ

ಜನ ನಮ್ಮನ್ನು ನೀರು ಕೇಳಿದರೆ ಡಿಸಿ ಕಚೇರಿಗೇ ಕಳಿಸುತ್ತೇವೆ.

ಹಾಸನ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಆದರೆ ಜಿಲ್ಲಾಧಿಕಾರಿ ನೀರು ಒದಗಿಸುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ಶೀಘ್ರವೇ ಅನುದಾನ ಬಿಡುಗಡೆಯಾಗದಿದ್ದರೆ ಡಿಸಿ ಕಚೇರಿ ಎದುರು ಪಂಚೆ ಹಾಸಿಕೊಂಡು ಮಲಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ ಬಂದಿದ್ದೇನೆ‌‌ ಎಂದರು.

ಕುಡಿಯುವ ನೀರಿಗೆ ಹಣ ಬಿಡುಗಡೆ ಮಾಡಿ ಎಂದು ಜಿಲ್ಲಾಧಿಕಾರಿಯನ್ನು ಕೇಳಿದರೆ, ‘ನಾನೇ ಹಳ್ಳಿಗಳಿಗೆ ಬಂದು ನೋಡುತ್ತೇನೆ’ ಎನ್ನುತ್ತಾರೆ. ಎಮ್ಮೆಲ್ಲೆಗಳ ಮೇಲೆ ವಿಶ್ವಾಸ ಇಲ್ಲದಿದ್ದರೆ ನೀವೇ ಬಂದು ಬಿಡಿ. ಶಾಸಕರ ಕೆಲಸ ಡಿಸಿ ಮಾಡುವುದಾದರೆ ನಮಗೇನು ಹೊಟ್ಟೆಯುರಿಯೇ? ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಜನ ನಮ್ಮನ್ನು ನೀರು ಕೇಳಿದರೆ ಡಿಸಿ ಕಚೇರಿಗೇ ಕಳಿಸುತ್ತೇವೆ. ನಾವು ಆರಾಮವಾಗಿ ಹಳ್ಳಿ ಕಡೆ ತಿರುಗಿಕೊಂಡಿರುತ್ತೇವೆ ಎಂದರು.

ಕುಡಿಯುವ ನೀರಿಗಾಗಿ ಶಾಸಕರಿಗೆ ಕೊಟ್ಟಿರುವ 25 ಲಕ್ಷ ರೂ. ಬಿಡುಗಡೆ ಮಾಡಬೇಕು, ಎನ್‌ಡಿಆರ್‌ಎಫ್ ನಿಯಮಗಳನ್ನು ಬದಿಗೊತ್ತಿ ಹಣ ನೀಡಬೇಕು ಎಂದು ಆಗ್ರಹಿಸಿದರು.

ದುಡ್ಡು ಕೊಟ್ಟಿದ್ದೀನಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕುಡಿಯುವ ನೀರಿಗಾದರೂ ಹಣ ಕೊಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡುತ್ತೇನೆ. ಯಾವ ರೂಪದಲ್ಲಾದರೂ ಕುಡಿಯುವ ನೀರಿಗೆ ಹಣ ಕೊಡಿ ಎಂದು ಕೇಳಿದ್ದೇನೆ ಎಂದರು.

ಜಿಲ್ಲಾ ಖನಿಜ ನಿಧಿಯಲ್ಲಿರುವ ಹಣವನ್ನು ಗಣಿ ಬಾಧಿತ ಪ್ರದೇಶಕ್ಕೆ ಬಳಸಬಹದು. ಜಿಲ್ಲೆಯಲ್ಲಿ ಆರು ಕೋಟಿ ರೂ. ಡಿಎಂಎಫ್ ಇದ್ದರೂ ಡಿಸಿ ಬಳಸುತ್ತಿಲ್ಲ. 60 ಲಕ್ಷ ರೂ. ಬಳಕೆ ಮಾಡಿದ್ದೇನೆ ಎಂದು ಮಂಡ್ಯ ಸಂಸದೆ ಸುಮಲತಾ ನಿನ್ನೆ ಹೇಳಿದ್ದಾರೆ.

ಖನಿಜ ನಿಧಿ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ.‌ಆರು ತಿಂಗಳಿನಿಂದ ಹಣ ಹಂಚಲು ಮಂತ್ರಿ ಕೇಳ್ತಿನಿ ಅಂತಾರೆ.
ಚುನಾವಣೆ ಘೋಷಣೆಯಾದರೆ ಅವರನ್ನೇ ಕೇಳ್ತಾರಾ? ಎಂದು ಪ್ರಶ್ನಿಸಿದರು.

ಒಂದು ಅಂಗನವಾಡಿ ಕಟ್ಟಡ ರಿಪೇರಿಗೆ ದುಡ್ಡು ಕೊಡ್ತಿಲ್ಲ, ಡಿಸಿ ಅವರು ಮಂತ್ರಿ ಕೇಳುವುದಾದರೆ ಕೇಳಲಿ. ಒಬ್ಬ ಜಿಲ್ಲಾಧಿಕಾರಿಯಾಗಿ ಈ ರೀತಿ ನಡೆದುಕೊಳ್ಳಬಾರದು. ಎರಡು ಮೂರು ದಿನದಲ್ಲಿ ಹಣ ಬಿಡುಗಡೆ ಮಾಡ್ತಿನಿ ಅಂತ ಹೇಳಿದ್ದಾರೆ. ಇಲ್ಲವಾದರೆ ಪ್ರತಿಭಟನೆ ನಡೆಸುತ್ತೇನೆ ಎಂದು‌ ಎಚ್ಚರಿಸಿದರು.