ನಾನೇ ಹದಿನೈದು ವರ್ಷ ಸಾಕಿದೆ, ನನ್ನ ಹತ್ತಿರ ತಿಂದು, ತೇಗಿ ಅಲ್ಲಿಗೆ ಹೋಗಿದ್ದಾನೆ,‌ ಟೋಪಿ ಹಾಕಿ ಹೌಸಿಂಗ್ ಬೋರ್ಡ್ ಚೇರ್‌ಮೆನ್ ಆಗವ್ನೆ; ಶಾಸಕ ಶಿವಲಿಂಗೇಗೌಡ ವಿರುದ್ಧ ಹರಿಹಾಯ್ದ ಎಚ್.ಡಿ.ರೇವಣ್ಣ

2028 ಕ್ಕೆ ಅವನ ಸ್ಥಿತಿ ಏನಾಗುತ್ತೆ, ನಾನು ಭವಿಷ್ಯ ಹೇಳಲ್ಲ. ಕೋಡಿಮಠದ ಸ್ವಾಮೀಜಿ ಕೇಳಿ ಹೇಳ್ತೀನಿ

ಹಾಸನ: ಒಬ್ಬ ಇದ್ದ,‌ ಇಲ್ಲಿ ಗೀಟಲ್ಲ ಅಂತ ಅಲ್ಲಿಗೆ ಹೋಗಿದ್ದಾನೆ. ನಾನೇ ಹದಿನೈದು ವರ್ಷ ಸಾಕಿದೆ, ನನ್ನ ಹತ್ತಿರ ತಿಂದು, ತೇಗಿ ಹೋಗಿದ್ದಾನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ, ಗೃಹಮಂಡಳಿ ಅಧ್ಯಕ್ಷ, ಶಾಸಕ‌ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಅರಸೀಕೆರೆ ತಾಲ್ಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಜೆಡಿಎಸ್-ಬಿಜೆಪಿ ಪ್ರಚಾರ ಸಭೆಯಲ್ಲಿ ಎಚ್.ಡಿ.ರೇವಣ್ಣ ಭಾಷಣ‌ ಮಾಡಿದರು.

ಇಂತಹವರನ್ನೆಲ್ಲಾ ನೋಡಿ ಬಿಟ್ಟಿರುವವನು ನಾನು. ಹದಿನೈದು ವರ್ಷ ಇಲ್ಲಿ ವ್ಯಾಪಾರ ಮಾಡಿ, ಲೂಟಿ ಮಾಡಿ ಅಲ್ಲಿ ಹೋಗವ್ನೆ. ಅವನಿಗೆ ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತೆ ಎಂದರು.

ಪರ್ಸೆಂಟೇಜ್ ಬಿಟ್ಟು ಯಾವುದನ್ನು ಮುಟ್ಟಲ್ಲ ಗಿರಾಕಿ. ಇವನು ಎಲ್ಲರಿಗೂ ಟೋಪಿ ಹಾಕಿ ಹೌಸಿಂಗ್ ಬೋರ್ಡ್ ಚೇರ್‌ಮೆನ್ ಆಗವ್ನೆ. ಇವೆಲ್ಲ ಜಾಸ್ತಿ ದಿನ ನಡೆಯಲ್ಲ, ನಾನು ಹದಿನೈದು ವರ್ಷ ಸಾಕಿದ್ನಲ್ಲ ಅವನಿಗೆ ಜನರೇ ಶಿಕ್ಷೆ ಕೊಡುವ ಕಾಲ ಬರುತ್ತೆ. 2028 ಕ್ಕೆ ಅವನ ಸ್ಥಿತಿ ಏನಾಗುತ್ತೆ, ನಾನು ಭವಿಷ್ಯ ಹೇಳಲ್ಲ. ಕೋಡಿಮಠದ ಸ್ವಾಮೀಜಿ ಕೇಳಿ ಹೇಳ್ತೀನಿ ಎಂದರು.

ಇಲ್ಲಿ ಯಾರೂ ಹೆದಬೇಕಿಲ್ಲ, ಅದ್ಯಾರೋ ನಮ್ಮ ಮುಖಂಡನನ್ನು ಮುಟ್ಟುತ್ತಾರೆ ನೋಡೋಣ. ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಯಾರೇ ಇರಲಿ ಅದ್ಯಾರೋ ಬರ್ತಾರೆ ಬರಲಿ ಎಂದರು.