ಬದುಕಿರುವವರೆಗೂ ಕಾರ್ಯಕರ್ತರ ಸಂಕಷ್ಟಕ್ಕೆ ಜತೆಯಾಗಿ ನಿಲ್ಲುತ್ತೇನೆ: ಎಚ್.ಡಿ.ರೇವಣ್ಣ

ಹಾಸನ: ನಾನು ಬದುಕಿರುವವರೆಗೆ ಜಿಲ್ಲೆಯ ಜನರ ಸಹಕಾರಕ್ಕೆ ಋಣಿಯಾಗಿರುತ್ತೇನೆ. ನಮ್ಮ ಕಾರ್ಯಕರ್ತರ ಸಂಕಷ್ಟಕ್ಕೆ ಜತೆಯಾಗಿ ನಿಲ್ಲುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.

ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ. ನನಗೆ ನ್ಯಾಯಾಲಯದ ಬಗ್ಗೆ ಗೌರವವಿದೆ‌. ನಾನು ದೇವರ ಮೇಲೆ ನಂಬಿಕೆ ಇಟ್ಟಿರುವವನು ಎಂದರು.

ರಾಜ್ಯದ, ಜಿಲ್ಲೆಯ ಹಾಗೂ ಹೊಳೆನರಸೀಪುರದ‌ ಜನರು ದೇವೇಗೌಡರಿಗೆ ಅರವತ್ತು ವರ್ಷದಿಂದ ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ಕುಮಾರಸ್ವಾಮಿ, ನನಗೆ ಶಕ್ತಿ ಕೊಟ್ಟಿದ್ದಾರೆ. ಇಪ್ಪತ್ತೈದು ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ.

ಹೊಳೆನರಸೀಪುರ ತಾಲ್ಲೂಕಿನ ಜನರು, ಜಿಲ್ಲೆಯ ಜನರ ಜತೆ ನಾನು ಬದುಕಿರುವವರೆಗೂ ಇರುತ್ತೇನೆ. ನಿಮ್ಮ ಜತೆ ನಾನು, ದೇವೇಗೌಡರು, ಕುಮಾರಸ್ವಾಮಿ ಹಾಗೂ ನಮ್ಮ ಕುಟುಂಬ ಇರುತ್ತದೆ. ಯಾರೂ ದೃತಿಗೆಡಬೇಕಾದ ಪ್ರಮೇಯವಿಲ್ಲ. ಜಿಲ್ಲೆಯ ಜನ ನನಗೆ ಸಹಕಾರ ಕೊಟ್ಟಿದ್ದಾರೆ, ಆ ಸಹಕಾರಕ್ಕೆ ನಾನು ಋಣಿಯಾಗಿರುತ್ತೇನೆ ಎಂದರು.