ಹಾಲು ಖರೀದಿ ದರ ಏರಿಕೆಯಿಂದ ಹಾಮೂಲ್ ಗೆ ಮಾಸಿಕ 9‌ಕೋಟಿ ರೂ.‌ನಷ್ಟ: ಎಚ್.ಡಿ.ರೇವಣ್ಣ ಆತಂಕ

ಹಾಸನ, ಏಪ್ರಿಲ್ 02: ರಾಜ್ಯ ಸರ್ಕಾರದ ಆದೇಶದಂತೆ ಏಪ್ರಿಲ್ 1 ರಿಂದ ಉತ್ಪಾದಕರಿಂದ ಹಾಲು ಖರೀದಿ ದರವನ್ನು ಪ್ರತಿ ಲೀಟರ್‌ಗೆ 4 ರೂಪಾಯಿ ಹೆಚ್ಚಿಸಲಾಗಿದೆ. ಆದರೆ ಈ ನಿರ್ಧಾರದಿಂದ ಹಾಮೂಲ್, ಮಾರಾಟವಾಗದ ಹಾಲಿಗೂ ನೀಡುವ ಬಟವಾಡೆಯಿಂದ ಮಾಸಿಕ 9 ಕೋಟಿ ರೂಪಾಯಿ ನಷ್ಟವಾಗುವ ಆತಂಕ ಎದುರಾಗಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಈ ಬಗ್ಗೆ ಮುಖ್ಯಮಂತ್ರಿ, ಸರ್ಕಾರದ ಕಾರ್ಯದರ್ಶಿ ಹಾಗೂ ಕೆಎಂಎಫ್‌ಗೆ ಎರಡು ಬಾರಿ ಪತ್ರ ಬರೆದು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ನಷ್ಟ ಯಾಕೆ?
ಹಾಸನ ಹಾಲು ಒಕ್ಕೂಟಕದಲ್ಲಿ ಪ್ರತಿದಿನ 12.58 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ 1.98 ಲಕ್ಷ ಲೀಟರ್ ಹಾಲು ಹಾಗೂ 1. 20 ಲಕ್ಷ ಲೀಟರ್ ಮೊಸರು ಮಾರಾಟ ಮಾಡಲಾಗುತ್ತಿದೆ.

ಒಟ್ಟಾರೆ 3.18 ಲಕ್ಷ ಲೀಟರ್ ಉತ್ಪನ್ನಗಳು ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾರಾಟವಾಗುತ್ತಿವೆ. ಆದರೆ ಉಳಿದ 9.40 ಲಕ್ಷ ಲೀಟರ್ ಹಾಲು ಮಾರಾಟವಾಗದೇ ಉಳಿಯುತ್ತಿದೆ. ಇನ್ನೊಂದು ತಿಂಗಳಲ್ಲಿ 2.5 ಲಕ್ಷ ಲೀಟರ್ ಹಾಲು ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೇವಣ್ಣ ಹೇಳಿದರು.

“ಮಾರಾಟವಾಗದ ಹಾಲಿಗೂ ಪ್ರತಿ ಲೀಟರ್ ಗೆ 4 ರೂಪಾಯಿ ದರ ಹೆಚ್ಚಳ ಮಾಡಿ ಹಾಲು ಉತ್ಪಾದಕರಿಗೆ ನೀಡುವುದರಿಂದ‌ ಹಾಸನ ಹಾಲು ಒಕ್ಕೂಟಕ್ಕೆ ದಿನಕ್ಕೆ 36 ಲಕ್ಷ ರೂಪಾಯಿ ಮತ್ತು ತಿಂಗಳಿಗೆ 9 ಕೋಟಿ ರೂಪಾಯಿ ನಷ್ಟವಾಗುತ್ತದೆ. ಇದು ಒಕ್ಕೂಟದ ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಒಂದು ಸಂಸ್ಥೆಯನ್ನು ಕಟ್ಟುವುದು ಸುಲಭವಲ್ಲ, ಕಟ್ಟಿರುವುದನ್ನು ಉಳಿಸಿಕೊಳ್ಳಬೇಕು” ಎಂದ ಅವರು ಈ ಆತಂಕವನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ ಎಂದರು.

ಸರ್ಕಾರದ ಒತ್ತಡ:
ಮುಖ್ಯಮಂತ್ರಿಗಳ ಆದೇಶಕ್ಕೆ ಗೌರವ ನೀಡಿ ಏಪ್ರಿಲ್ 1 ರಿಂದ ಹಾಲು ಖರೀದಿ ದರ ಹೆಚ್ಚಳ ಮಾಡಲಾಗಿದೆ. “ಪ್ರಸ್ತುತ ಒಕ್ಕೂಟದ ಬಳಿ 5.5 ರಿಂದ 6 ಕೋಟಿ ರೂಪಾಯಿ ಲಾಭದ ಹಣ ಇದೆ. ಆ ಹಣ ಮುಗಿಯುವವರೆಗೆ ಖರೀದಿ ದರ ಹೆಚ್ಚಳವನ್ನು ಮುಂದುವರಿಸುತ್ತೇವೆ. ಆದರೆ ನಷ್ಟ ಶುರುವಾದರೆ ದರ ಕಡಿಮೆ ಮಾಡಬೇಕಾಗುತ್ತದೆ” ಎಂದು ಅವರು ಹೇಳಿದರು.

“ನಷ್ಟವಾದರೆ ಯಾರು ಜವಾಬ್ದಾರಿ ಹೊರುತ್ತಾರೆ? ಕೆಎಂಎಫ್ ಅಥವಾ ಸರ್ಕಾರ ನಷ್ಟವನ್ನು ಭರಿಸುತ್ತವೆಯೇ?” ಎಂದು ಅವರು ಪ್ರಶ್ನಿಸಿದರು.ಕೆಲವರು ಮುಖ್ಯಮಂತ್ರಿಗಳ ಹೇಳಿಕೆಯನ್ನು ಉಲ್ಲೇಖಿಸಿ 4 ರೂಪಾಯಿ ದರ ಹೆಚ್ಚಿಸಲು ಒತ್ತಡ ಹೇರಿದ್ದಾರೆ ಎಂದು ರೇವಣ್ಣ ಆರೋಪಿಸಿದರು.

“ತಿಂಗಳಿಗೆ 9 ಕೋಟಿ ರೂಪಾಯಿ ನಷ್ಟದಲ್ಲಿ ಹಾಲು ಮಾರಾಟ ಮಾಡುವುದು ಸಾಧ್ಯವೇ? ಈ ವಸ್ತುಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ” ಎಂದರು.