ಮೂರು ಚುನಾವಣೆಗಳಲ್ಲಿ ಒಂದು ರೂಪಾಯಿಯೂ ಖರ್ಚು ಮಾಡಿಸದೆ ಎಲೆಕ್ಷನ್ ಮಾಡಿ ಗೆಲ್ಲಿಸಿಕೊಂಡು ಬಂದಿದ್ದೆ ಇದಕ್ಕೆಜೀನುಕಲ್ಲು ಸಿದ್ದೇಶ್ವರನೇ ಸಾಕ್ಷಿ; ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಎಚ್.ಡಿ.ರೇವಣ್ಣ ಗರಂ!

ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಹಿಂದೆ ಮಾಜಿ ಪ್ರಧಾ‌ನಿ ಎಚ್.ಡಿ.ದೇವೇಗೌಡರ ಕುಟುಂಬದ ಪರಿಶ್ರಮವಿದೆ ಎನ್ನುವುದಕ್ಕೆ ಕಾಮಗಾರಿಗಳ ಸಾಕ್ಷಿ‌ಗುಡ್ಡೆಗಳಿವೆ  ಎಂದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರದ ನಬಾರ್ಡ್‌ನಿಂದ ರೈತರಿಗೆ ಕಾರ್ಯಕ್ರಮ ರೂಪದಲ್ಲಿ ಸಾಲ ಕೊಡುವಂತೆ ಮಾಡಿದ್ದರು. ನಬಾರ್ಡ್ ಮೂಲಕ ರೈತರಿಗೆ ಸಾಲ ಕೊಡುವುದು, ರಸ್ತೆಗೆ ಹಣ ಕೊಡುವ ಪರಿಪಾಠ ಆರಂಭಿಸಿದರು.

ನಬಾರ್ಡ್‌ನಿಂದ ಅಪೆಕ್ಸ್ ಬ್ಯಾಂಕ್‌ಗೆ 70% ಹಣ ಕೊಡುತ್ತಿದ್ದರು. ಕೇಂದ್ರದಿಂದ ಸಿಗುವ ಸೌಲಭ್ಯವನ್ನು ರಾಜ್ಯಕ್ಕೆ ದೊರಕುವಂತೆ ಮಾಡಿದ್ದೇ ದೇವೇಗೌಡರು.
ಕುಮಾರಸ್ವಾಮಿ ಸಾಲಮನ್ನಾ ಮಾಡದಿದ್ದರೆ 21 ಬ್ಯಾಂಕ್‌ಗಳು ಮುಳುಗಿ ಹೋಗುತ್ತಿದ್ದವು. ಅಂತಹ ದೇವೇಗೌಡರನ್ನು ಸಾಕ್ಷಿ ಗುಡ್ಡೆ ಕೇಳುತ್ತಾರೆ ಎಂದು‌ ಕಿಡಿಕಾರಿದರು.

ಅಪೆಕ್ಸ್ ಬ್ಯಾಂಕ್‌ಗೆ 9162 ಕೋಟಿ ರೂ. ಕೊಡಿ ಎಂದು ಕೇಂದ್ರ, ಆರ್‌ಬಿಐ, ನಬಾರ್ಡ್‌ಗೆ ದೇವೇಗೌಡರು ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ವಿಶ್ವಾಸದಲ್ಲಿಟ್ಟುಕೊಳ್ಳಬೇಕು. ಬೆಳಿಗ್ಗೆ ಎದ್ದರೆ ಪ್ರಧಾನಮಂತ್ರಿಯನ್ನು ಬೈತಾರೆ. ವಿಶ್ವಾಸ ಇಟ್ಟುಕೊಂಡರೆ ಮಾತ್ರ ಅವರು ಏನಾದರೂ ಕೊಡ್ತಾರೆ ಎಂದರು.

ಕುಮಾರಸ್ವಾಮಿ ಹಾಸನ ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‌ಗಳ 531 ಕೋಟಿ ರೂ. ಸಾಲಮನ್ನ ಮಾಡಿದರು. 9600 ಕೋಟಿ ರೂ. ರಾಷ್ಟ್ರೀಯ ಬ್ಯಾಂಕ್‌ಗಳ ಸಾಲಮನ್ನಾ ಆಗಿದೆ. ಕಾಂಗ್ರೆಸ್‌ನವರೇ ರೈತರ ಬಗ್ಗೆ ಮಾತನಾಡುತ್ತಿದ್ದಾರಲ್ಲ ಅವರು ಸಾಲಮನ್ನಾ ಮಾಡಲಿ ಎಂದು ಸವಾಲು ಹಾಕಿದರು.

ದೇವೇಗೌಡರ ರಾಜಕೀಯ ಜೀವನ ಮುಗಿದು ಹೋಯ್ತು ಅಂತ ಭಾಷಣ ಮಾಡುತ್ತಾರೆ. ಆರು ಜಿಲ್ಲೆಯ ಜನ ಕರೆದುಕೊಂಡು ಬಂದು ಸಮಾವೇಶ ಮಾಡುತ್ತಾರೆ. ಯಾವ ಆಂದೋಲನ ಇದು ಎಂದು ಪ್ರಶ್ನಿಸಿದರು.

ಈ ಜಿಲ್ಲೆಗೆ ಕಾಂಗ್ರೆಸ್ ಪಕ್ಷ ಏನು ಕೊಡುಗೆ ಕೊಟ್ಟಿದೆ ಎಂಬುದನ್ನು ಹೇಳಲಿ. ಬ್ರಿಟೀಷರ ಕಾಲದಲ್ಲಿ ಆಗಿದ್ದ ಹಾಸನ-ಮೈಸೂರು ರೈಲ್ವೆ ಮಾರ್ಗದ ಕಂಬಿ ಕಿತ್ತುಕೊಂಡು ಹೋದವರು ಕಾಂಗ್ರೆಸ್‌ನವರು, ದೇವೇಗೌಡರು ಪ್ರಧಾನಮಂತ್ರಿಯಾಗಿದ್ದ ಹತ್ತೂವರೆ ತಿಂಗಳಿನಲ್ಲಿ ಆ ರೈಲ್ವೆ ಮಾರ್ಗ ಮರು‌ನಿರ್ಮಾಣ ಮಾಡಿದರು.

ಡಿಸಿಎಂ ಈ ಜಿಲ್ಲೆ ಏನು ಕೊಡುಗೆ ಕೊಟ್ಟಿದ್ದಾರೆ? ರೈಲ್ವೆ ಮಾರ್ಗ, ಕೋರ್ಟ್, ಬಸ್ಟಾಂಡ್ ಕಟ್ಟಿದ್ದು ಯಾರು?
ಇವೆಲ್ಲಾ ಸಾಕ್ಷಿ ಗುಡ್ಡೆಗಳಲ್ಲವಾ? ಗಿರಾಕಿಗಳೇ, ಆಸ್ಪತ್ರೆ, ಇಂಜಿನಿಯರ್, ಮೆಡಿಕಲ್ ಕಾಲೇಜು, ಪಶುವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜುಗಳನ್ನು ನೋಡಿ. ಈ‌ ಜಿಲ್ಲೆಯ ಜನ ದೇವೇಗೌಡರಿಗೆ, ನಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ಅವರ ಋಣ ನಮ್ಮ ಮೇಲೆ ಇದೆ, ಅದನ್ನು ತೀರಿಸುತ್ತೇವೆ‌ ಎಂದರು.

ನನ್ನ ಕೈಲಾದ ಕೆಲಸವನ್ನು ಈ ಜಿಲ್ಲೆಗೆ ಮಾಡುತ್ತೇನೆ.
ಇಂತಹ ಹತ್ತು ಸಮಾವೇಶ ಮಾಡಿದರೂ ನಾನೇನು ತಲೆ ಕೆಡಿಸಿಕೊಳ್ಳಲ್ಲ. ಇವರಿಗೆ ತಾಕತ್ ಇದ್ದರೆ ಕಾಂಗ್ರೆಸ್ ಬಿಟ್ಟು ಬಂದು ನಮ್ಮ ರೀತಿ ಪಕ್ಷ ಕಟ್ಟಲಿ.
ಹಿಂದಿನ ಕಾಂಗ್ರೆಸ್ ಈಗ ಇಲ್ಲ, ಈಗ ಇರುವುದು ನಕಲಿ ಕಾಂಗ್ರೆಸ್ ಎಂದು ಜರಿದರು.

ನಮ್ಮಿಂದ ವಲಸೆ ಹೋದವರು ಅಲ್ಲಿ ಇದ್ದಾರೆ ಎಂದು
ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಮೂರು ಚುನಾವಣೆಯಲ್ಲಿ ಒಂದು ರೂಪಾಯಿ ಖರ್ಚು ಮಾಡಿಸದೆ ಎಲೆಕ್ಷನ್ ಮಾಡಿ ಗೆಲ್ಲಿಸಿಕೊಂಡು ಬಂದೆ.‌ ಇದಕ್ಕೆಜೀನುಕಲ್ಲು ಸಿದ್ದೇಶ್ವರನೇ ಸಾಕ್ಷಿ ಎಂದರು.

ಇವರೆಲ್ಲ ಜೆಡಿಎಸ್ ಮುಗಿದುಹೋಯ್ತು ಅಂತಾರೆ.
2028 ಕ್ಕೆ ಜೆಡಿಎಸ್ ಏನು ಎಂದು ಗೊತ್ತಾಗುತ್ತದೆ ಎಂದರು.