ನಾವು ಕಟ್ಟೋದು, ಅವರು ಉದ್ಘಾಟನೆ ಮಾಡೋದು ಎನ್ನುವುದಕ್ಕೆ ಸಾಕ್ಷಿಗುಡ್ಡೆಗಳನ್ನು ತೋರಿಸುತ್ತೇನೆ, ಒಕ್ಕಲಿಗ ನಾಯಕ ಬಿ.ಎಲ್.ಶಂಕರ್ ಈಗ ಏನಾಗಿದ್ದಾರೆ?; ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಎಚ್.ಡಿ.ರೇವಣ್ಣ ತಿರುಗೇಟು

ಹಾಸನ: ಜನಕಲ್ಯಾಣ ಸಮಾವೇಶದಲ್ಲಿ ದೇವೇಗೌಡರ ಕುಟುಂಬದ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿದ ಟೀಕೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ತಿರುಗೇಟು ನೀಡಿದ್ದು, ನಾವು ಕಟ್ಟೋದು, ಅವರು ಉದ್ಘಾಟನೆ ಮಾಡೋದು ಎನ್ನುವುದಕ್ಕೆ ಸಾಕ್ಷಿಗುಡ್ಡೆಗಳನ್ನು ತೋರಿಸುತ್ತೇನೆ ಎಂದರು.

ಸಮಾಧಿಸ್ತರಾದ ಕರ್ಮಯೋಗಿ ದಿಗಂಬರ ಜೈನ ಮಹಾಸಂಸ್ಥಾನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರ ನಿಷಿಧಿ ಮಂಟಪ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತಡವಾಗಿ ಬಂದು ನಿಷಿಧಿ ಮಂಟಪಕ್ಕೆ ಪುಷ್ಪಾರ್ಚನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಾಸನದಲ್ಲಿ ಯಾವ್ಯಾವ ಸಾಕ್ಷಿ ಗುಡ್ಡೆ ಇದೆ ಎಂಬುದನ್ನು ಕಾಲ ಬಂದಾಗ ಹೇಳ್ತಿನಿ. ಅವರು ಬಂದರೆ ಕರೆದುಕೊಂಡು ಹೋಗಿ ಎಲ್ಲೆಲ್ಲಿ ಇಂತಹ ಕಡೆ ಸಾಕ್ಷಿ ಗುಡ್ಡೆ ಇದೆ ಅಂತ ತೋರುಸ್ತಿನಿ ಎಂದರು.

ಹಾಸನ ಬಸ್ಟಾಂಡ್, ಹಾಸನ-ಬೆಂಗಳೂರು ರೈಲ್ವೆ ಮಾರ್ಗ, 900 ಕೋಟಿ ರೂ. ವೆಚ್ಚದಲ್ಲಿ 24 ಮೇಲ್ಸೇತುವೆ, ಮೆಡಿಕಲ್ ಕಾಲೇಜಿಗೆ 250 ಕೋಟಿ ರೂ. ಕೊಟ್ಟಿದ್ದೇವೆ. ಹಾಸನ ಫ್ಲೈಓವರ್‌ವನ್ನು ಕಾಂಗ್ರೆಸ್ ಸರ್ಕಾರ ಇದ್ದಾಗ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಕೋರ್ಟ್, ಇಂಜಿನಿಯರಿಂಗ್ ಕಾಲೇಜು, 120 ಕೋಟಿ ರೂ. ಖರ್ಚು ಮಾಡಿರುವ ನಂಬರ್ ಒನ್ ‌ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇದ್ದರೆ ಅದು ಹಾಸನ, ರಾಮನಗರ, ಹೊಳೆನರಸೀಪುರ ತಾಲ್ಲೂಕಿನ, ಮೊಸಳೆಹೊಸಳ್ಳಿಗಳಲ್ಲಿ ಇವೆ.

ಈ ಜಿಲ್ಲೆಯಲ್ಲಿ ಕಾಲೇಜುಗಳನ್ನು ಯಾವ ರೀತಿ ಮಾಡಿದ್ದೇವೆ? ಈ ಜಿಲ್ಲೆಗೆ ಏನು ಬೇಕೋ ದೇವೇಗೌಡರು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಯಾವ್ಯಾವ ಸಾಕ್ಷಿ ಗುಡ್ಡೆ ಬೇಕು ತೋರಿಸೋಣ ಕಾಲ ಬಂದಾಗ ಉತ್ತರ ಕೊಡ್ತಿನಿ ಎಂದರು.

ಇನ್ನೂ ಸ್ವಲ್ಪ ದಿನ ಹೋಗಲಿ ರಾಜಕೀಯವಾಗಿ ಏನೇನು ನಡೆಯುತ್ತೆ ಹೇಳ್ತಿನಿ. ಜಿಲ್ಲೆಯಲ್ಲಿ ಏಳಕ್ಕೆ ಏಳೂ ಕ್ಷೇತ್ರ ಗೆಲ್ತಿವಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

2023 ರಲ್ಲಿ ಚುನಾವಣೆ ನಡೆದಿದೆ. ಕುಮಾರಸ್ವಾಮಿ ಅವರ ಮುಖ್ಯಮಂತ್ರಿ ಆಗಿ ಇಳಿದ ಮೇಲೆ ಮೂರು ವರ್ಷ ಈ ಜಿಲ್ಲೆಯಲ್ಲಿ ರಾಜಕಾರಣ ಏನು ನಡೆಯಿತು ಅಂತ ಜನರಿಗೆ ಗೊತ್ತಿದೆ. ಈಗ ಏನೂ ಹೇಳಲ್ಲ‌ ಎಂದರು.

ದೇವೇಗೌಡರು ಒಕ್ಕಲಿಗ ನಾಯಕರನ್ನು ಬೆಳೆಸಿಲ್ಲ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಒಕ್ಕಲಿಗರ ನಾಯಕರು ಬೆಳೆಸಿಲ್ವಾ? ಬಿ.ಎಲ್.ಶಂಕರ್ ಅವರು ಇಲ್ಲಿ ಇದ್ದಾಗ ಅವರಿಗೆ ಏನೇನು ಅಧಿಕಾರ ಇತ್ತು? ಕಾಂಗ್ರೆಸ್‌ಗೆ ಹೋದ ಮೇಲೆ ಏನ್ಮಾಡಿದ್ದಾರೆ? ಅವರ ಪರಿಸ್ಥಿತಿ ಏನಾಗಿದೆ?

ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಕಲೆ ಬಿಡುಗಡೆ ಮಾಡ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ಬಿ.ಎಲ್.ಶಂಕರ್ ನನ್ನ ಆತ್ಮೀಯ ಸ್ನೇಹಿತರು, ನನಗೆ ಅವರ ಬಗ್ಗೆ ಗೌರವವಿದೆ. ಈಗಲಾದರೂ ಅವರಿಗೆ ಎಂಎಲ್‌ಸಿ ಸ್ಥಾನ ಕೊಟ್ಟು, ಮಂತ್ರಿ ಮಾಡಿ ನಮ್ಮ ಸಮಾಜದ ಗೌರವ ಉಳಿಸಿಕೊಡಿ ಎಂದು ವ್ಯಂಗ್ಯವಾಡಿದರು.