ನಾಳೆ ಸಂಜೆಯೊಳಗೆ ಹಾಸನ ಜಿಲ್ಲೆ ಕೆರೆಗಳಿಗೆ ನೀರು‌ ಬಿಡದಿದ್ದರೆ ದಂಗೆ ಏಳುತ್ತೇವೆ; ಎಚ್.ಡಿ.ರೇವಣ್ಣ ಎಚ್ಚರಿಕೆ

ಜಿಲ್ಲೆಯಲ್ಲಿ ಏನಾದರೂ ಅನಾಹುತ ಆದರೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ನೇರ ಹೊಣೆ ಹೊರಬೇಕಾಗುತ್ತದೆ

ಹಾಸನ: ತುಮಕೂರಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮಾಜಿ ಸಚಿವ ಎಚ್.ಡಿ. ರೇವಣ್ಣ ಸರ್ಕಾರ, ಡಿಸಿ, ಎಸ್ಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗೆ ಯಾರು ಡ್ರಾಫ್ಟ್ ಮಾಡಿಕೊಟ್ಟರೋ ಗೊತ್ತಿಲ್ಲ, ಪೊಲೀಸರು ದೊಣ್ಣೆ, ಬಡಿಗೆ ತಗೊಳಿ ಅಂತ ಡಿಸಿ, ಎಸ್ಪಿ ಹೇಳಿದ್ದಾರೆ. ಯಾರು ದೊಣ್ಣೆ, ಬಡಿಗೆ ತಗೊಳ್ತಾರೆ ನೋಡೋಣ ಎಂದು ಕಿಡಿಕಾರಿದರು.

ನಾಳೆ ಸಂಜೆಯೊಳಗೆ ನಮ್ಮ ಜಿಲ್ಲೆಯ ಕೆರೆಗಳಿಗೆ ನೀರು ಬಿಡದಿದ್ದರೆ ಪ್ರತಿ ತೂಬಿನ ಬಳಿ ಐನೂರು ಜನ ನಿಲ್ಲಿಸುತ್ತೀನಿ. ಜೆಸಿಬಿ ಮೂಲಕ ತೂಬಿನಿಂದ ನೀರು ಹರಿಸುತ್ತೇವೆ. ಅದು ಯಾರು ಬರ್ತಾರೆ ಬರಲಿ ನೋಡೋಣ ಎಂದು ಎಚ್ಚರಿಕೆ ನೀಡಿದರು.

ನಾಳೆ ಸಂಜೆಯವರೆಗೆ ಸಮಯ ಕೊಡ್ತಿನಿ, ಅಷ್ಟರಲ್ಲಿ ಹಾಸನ ಜಿಲ್ಲೆಗೂ ನೀರು ಹರಿಸಬೇಕು. ಇಲ್ಲವಾದರೆ ಜಿಲ್ಲೆಯಲ್ಲಿ ಏನಾದರೂ ಅನಾಹುತ ಆದರೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ನೇರ ಹೊಣೆ ಹೊರಬೇಕಾಗುತ್ತದೆ ಎಂದರು.

ಎ1 ಜಿಲ್ಲಾಧಿಕಾರಿ, ಎ2 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಿಂದೆ ದೊಡ್ಡಹಳ್ಳಿಯಲ್ಲಿ ಗೋಲಿಬಾರ್ ಆಗಿದೆ. ಹೊಳೆನರಸೀಪುರದಲ್ಲಿ ಲಾಠಿಚಾರ್ಜ್ ಆಗಿ ಆಗೀನ ಎಸ್ಪಿಗೆ ಹತ್ತು ವರ್ಷ ಜಾಮೀನು ಸಿಗಲಿಲ್ಲ. ಹಾಸನ ಜಿಲ್ಲೆಯಲ್ಲಿ ಎಮರ್ಜೆನ್ಸಿ ಹೇರಿದ್ದಾರೆ. ಹಿಂದೆ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರು ಈಗ ಕಾಂಗ್ರೆಸ್ ಸರ್ಕಾರದಲ್ಲಿ ಹಾಸನದಲ್ಲಿ ಎಮರ್ಜೆನ್ಸಿ ಹೇರಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕುಡಿಯುವ ನೀರಿಗೆ ಕಾಂಗ್ರೆಸ್‌ನವರು ಎಮರ್ಜೆನ್ಸಿ ಹೇರಿದ್ದಾರೆ, ಇದು ದುರಾದೃಷ್ಟಕರ, ದೇವೇಗೌಡರು ಇರಲಿಲ್ಲ ಎಂದರೆ ತುಮಕೂರಿಗೆ ನೀರು ಹರಿಯುತ್ತಿರಲಿಲ್ಲ. ತುಮಕೂರಿಗೆ ನೀರು ಹರಿಸಲು ಜಿಲ್ಲೆಯ ರೈತರು ಜಮೀನು ಕಳೆದುಕೊಂಡಿದ್ದಾರೆ. ನೀರಾವರಿ ಸಲಹಾ ಸಮಿತಿ ಮೀಟಿಂಗ್ ಮಾಡದೇ ನೀರು ಬಿಟ್ಟಿದ್ದಾರೆ, ಇವರಿಗೆ ನಾಚಿಕೆಯಾಗಬೇಕು ಎಂದರು.

ನೀರು ಬಿಡದಿದ್ದರೆ ಜಿಲ್ಲೆಯಲ್ಲಿ ದಂಗೆ ಏಳಬೇಕಾಗುತ್ತದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಜಿಲ್ಲಾಧಿಕಾರಿ, ಎಸ್ಪಿ ನೇರ ಹೊಣೆ.

ನಾಳೆ ಸಂಜೆ ಐದು ಗಂಟೆಯವರೆಗೆ ಸಮಯ ಅಷ್ಟೇ,ನೀರು ಬಿಡದಿದ್ದರೆ ಒಂದು ಕಡೆ ಗೊರೂರು ಡ್ಯಾಂಗೆ ಮುತ್ತಿಗೆ, ಇನ್ನೊಂದು ಕಡೆ ಜಾಕ್ವೆಲ್ ಬಳಿ ಐನೂರು ಜನ ಸೇರಿ ನೀರು ಹರಿಸುತ್ತೇವೆ.ನಾವು ಯಾವುದೇ ಮನವಿ ಕೊಡಲ್ಲ, ನೇರವಾಗಿ ಹೇಳ್ತಿನಿ.

ಜಿಲ್ಲಾಧಿಕಾರಿ ಕಚೇರಿ ಒಳಗೆ ಹೋದರೆ ಒಳಗಡೆ ಹಾಕುಸ್ತಿನಿ ಅಂತಾರೆ. ತುಮಕೂರು ಹೆಸರಿನಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂದು ಕಿಡಿಕಾರಿದರು.