ಹಾಸನ: ಮನೆ ಕೆಲಸದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಗೂ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಭಾನುವಾರ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಹಿಳೆಯೊಬ್ಬರು ನೀಡಿದ ಲಿಖಿತ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೊಳೆನರಸೀಪುರದ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ತನ್ನ ಮೇಲೆ ರೇವಣ್ಣ ಹಾಗೂ ಪ್ರಜ್ವಲ್ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಭವಾನಿ ರೇವಣ್ಣ ಅವರು ಇಲ್ಲದ ವೇಳೆಯಲ್ಲಿ ರೇವಣ್ಣ ಅವರು ಹಣ್ಣು ನೀಡುವ ನೆಪದಲ್ಲಿ ಮೈಕೈ ಮುಟ್ಟುತ್ತಿದ್ದರು. ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು.
ಪ್ರಜ್ವಲ್ ರೇವಣ್ಣ ಅವರು ಅಡುಗೆ ಮನೆಯಲ್ಲಿ ಹಿಂದಿನಿಂದ ಬಂದು ಮೈ ಮುಟ್ಟುತ್ತಿದ್ದರು. ನಿನ್ನ ಮಗಳನ್ನೂ ಕರೆಸು ಎಂದು ಒತ್ತಾಯಿಸುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ತನಿಖೆ ದೃಷ್ಟಿಯಿಂದ ಆರಂಭವಾದ ಪ್ರಕರಣದ ಪರಿಧಿಗೆ ಅವರ ತಂದೆ ಎಚ್.ಡಿ.ರೇವಣ್ಣ ಅವರ ಹೆಸರೂ ಸೇರಿಕೊಂಡಿದ್ದು ಪೊಲೀಸರ ನಡೆ ಕುತೂಹಲ ಮೂಡಿಸಿದೆ.