ಮುಖ್ಯಮಂತ್ರಿಗಳೇ ನಿಮಗೆ ಷರಿಯಾ ಮುಖ್ಯವೋ? ಸಂವಿಧಾನವೋ?: ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹಾಸನ: ಸಿದ್ದರಾಮಯ್ಯ ಎಲ್ಲರಿಗೂ ಮುಖ್ಯಮಂತ್ರಿ ಆಗಿರಬೇಕು, ಕೆಲವರಿಗೆ ಮಾತ್ರ ಸಿಎಂ ಆಗಬಾರದು ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ಹಾಸನಾಂಬೆ ದೇವಿ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಬಿಜೆಪಿಯವರು ಉಪಚುನಾವಣೆಗಾಗಿ ವಕ್ಫ್ ವಿವಾದ ಮಾಡ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಆದರೆ ಅವರ ಸಂಪುಟದ ಸಚಿವರೇ
ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರ ಸೂಚನೆ ಮೇರೆಗೆ ಅಧಿಸೂಚಿತ ಭೂಮಿ ಖಾತೆ ಮಾಡಿಸಲು ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಅಧಿಕೃತ ಸಭೆ ಮಾಡಿದ್ದಾರೆ ಎಂದರು.

ಸಚಿವ ಜಮೀರ್ ಅಹಮದ್ ಅವರಿಗೆ ಸಿಎಂ ಬೆನ್ನೆಲುಬಾಗಿ ನಿಂತಿದ್ದಾರೆ. 1913 ರಲ್ಲಿ ವಕ್ಫ್ ಕಾಯ್ದೆ ತಂದರು. 1955 ರಲ್ಲಿ ನೆಹರೂ ಓಲೈಕೆ ರಾಜಕಾರಣ ಮುಂದುವರಿದ ಭಾಗವಾಗಿ ಸ್ವಾತಂತ್ರ್ಯದ ನಂತರ ಕಾಯ್ದೆ ಮುಂದುವರಿಸಿದರು. ಅದು ಕಾಂಗ್ರೆಸ್ ಮಾಡಿದ ಪ್ರಮಾದ ಎಂದು ಆರೋಪಿಸಿದರು.

1995 ರಲ್ಲಿ ಸಂವಿಧಾನಕ್ಕೆ ವಿರುದ್ಧವಾದ ಅವಕಾಶವನ್ನು ಕಾಂಗ್ರೆಸ್ ಸರ್ಕಾರ ನೀಡಿತು. 2013 ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಮತ್ತೆ ಇನ್ನಷ್ಟು ಬಲ ತುಂಬುವ ಕೆಲಸ ಮಾಡಿತು. ಮತಗಳು ಸಿಗುತ್ತವೆ ಎಂದು ಮತಾಂಧತೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದರು ಎಂದು ದೂರಿದರು.

ಅದರ ಪರಿಣಾಮವಾಗಿ ದಲಿತರ ಮನೆಗೂ ಸಂಚಕಾರ ಬಂದಿದೆ. ರೈತರು ಜಮೀನು ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ. 13 ಶತಮಾನದ ವಿರಕ್ತ ಮಠವೂ ಕಲ್ಬುರ್ಗಿಯ ಅಳಂದದಲ್ಲಿ ಬೀರಲಿಂಗೇಶ್ವರ ದೇವಾಲ, ಯಾದಗಿರಿ ಹಿಂದೂ ಸ್ಮಶಾನವೂ ವಕ್ಫ್ ಪ್ರಾಪರ್ಟಿ ಆಗಿದೆ. ಈ ಎಲ್ಲಾ ವಿವಾದಕ್ಕೆ ಆಗಿರುವುದು ಕಾಂಗ್ರೆಸ್‌ನ ಮತಾಂಧತೆಯನ್ನು ಪ್ರೋತ್ಸಾಹಿಸಿ ಮತ ಪಡೆಯುವ ನೀತಿಯೇ ಕಾರಣ ಎಂದು ವಾಗ್ದಾಳಿ ನಡೆಸಿದರು.

ಸಂವಿಧಾನಕ್ಕಿಂತ ಮಿಗಿಲು ಯಾರೂ ಇಲ್ಲ ಹಿಂದೂಗಳು ಜನಸಂಖ್ಯೆ ಶೇ.80ರಷ್ಟಿದ್ದರೂ ವಕ್ಫ್ ಕಾಯ್ದೆ ಇರುವ ಬಲ ಧಾರ್ಮಿಕ ದತ್ತಿ ಇಲಾಖೆಗೆ ಇಲ್ಲವಾಗಿದೆ. ಇಂತಹ ತಾರತಮ್ಯ ಮಾಡಬಾರದು. ಹಾಗಾಗಿ ಇಡೀ ವಕ್ಫ್ ಕಾಯ್ದೆ ಸಮಗ್ರ ರೀತಿಯಲ್ಲಿ ತಿದ್ದುಪಡಿ ಆಗಬೇಕು.

ಯಾರಾದರೂ ದಾನ ಕೊಟ್ಟಿದ್ದರೆ, ಸರ್ಕಾರ ಗ್ರಾಂಟ್ ಮಾಡಿದರೆ, ಕೊಂಡುಕೊಂಡಿದ್ದರೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಕ್ರಮಬದ್ದವಾಗಿದ್ದರೆ ಟೆನೆಂಟ್ ಆ್ಯಕ್ಟ್ ಪರಿಗಣಿಸಬೇಕು. ವಕ್ಫ್ ಕಾಯ್ದೆ ಅನ್ಯಾಯದ ಕಾನೂನಾಗಿದ್ದು ಬದಲಾಗಬೇಕು ಎಂದು ಆಗ್ರಹಿಸಿದರು.

ಕಾಯ್ದೆ ಬದಲಾವಣೆ ಆಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತೆ. ಜಮೀರ್ ಅಹಮದ್ ಅವರು ಕೋಮುಗಲಭೆ ಹುಟ್ಟುಹಾಕಲು ಕಾರಣರಾಗುತ್ತಿದ್ದಾರೆ. ಜಮೀರ್ ಅಹಮದ್ ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಒಂದು ಗೊಂದಲ ನಿರ್ಮಾಣವಾಗಿದೆ. ಹಾಗಾಗಿ ಜಮೀರ್ ಅಹಮದ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳೇ ನೀವು ವಕೀಲರಿದ್ದೀರಿ, ನೀವೇ ಹೇಳಿ, ಸಂವಿಧಾನಕ್ಕೆ ಮೀರಿದ ಕಾಯ್ದೆ ಇರುವುದನ್ನು ನೀವು ಸಮರ್ಥನೆ ಮಾಡ್ತೀರಾ? ನಿಮಗೆ ಷರಿಯಾ ಮುಖ್ಯ ಆಗುತ್ತೋ? ಸಂವಿಧಾನ ಮುಖ್ಯ ಆಗುತ್ತದೆಯೋ? ಷರಿಯಾ ಮುಖ್ಯವಲ್ಲ, ಸಂವಿಧಾನವೇ ಮುಖ್ಯ ಎನ್ನುವುದಾದರೆ ಸಂವಿಧಾನದ ಪರ ನಿಮ್ಮ ಬದ್ದತೆ ಪ್ರಕಟಿಸಿ ಎಂದು ಆಗ್ರಹಿಸುತ್ತೇನೆ ಎಂದರು.