ಹಾಸನ: ಕೆ.ಎಂ.ಶಿವಲಿಂಗೇಗೌಡರು ಮಂತ್ರಿಯಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಬರುವಂತಾಗಲಿ ಎಂದು ಮಾಜಿ ಸಚಿವ ಬಿ.ಶಿವರಾಮು ಹಾರೈಸಿದರು.
ನಗರದಲ್ಲಿ ಭಾನುವಾರ ಕೆ.ಎಂ.ಶಿವಲಿಂಗೇಗೌಡರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿವಲಿಂಗೇಗೌಡರು ನಾಲ್ಕನೇ ಬಾರಿ ಗೆದ್ದಿದ್ದಾರೆ. ಬಹುಶಃ ಹೋಲಿಕೆ ಮಾಡಿದ್ರೆ ಅವರ ಸ್ಥಿತಿ ನನ್ನ ಸ್ಥಿತಿ ಒಂದೇ. ಅರಸೀಕೆರೆ, ಗಂಡಸಿ ಸುಲಭದ ಕ್ಷೇತ್ರಗಳಲ್ಲ, ನಾವು ಬರಗಾಲಪೀಡಿತ ಪ್ರದೇಶದಿಂದ ಬಂದವರು. ಇಬ್ಬರೂ ನಾಲ್ಕು ಬಾರಿ ಗೆದ್ದರೂ ಮೊದಲ ಸಾರಿ ಮಂತ್ರಿಗಳಾಗಲಿಲ್ಲ.
ಒಂದು ವರ್ಷ, ಎರಡು ವರ್ಷ ಕಳೆದೇ ಮಂತ್ರಿ ಆದೆವು, ಅದೇನೋ ನಮ್ಮ ದುರದೃಷ್ಟನೋ ಗೊತ್ತಿಲ್ಲ ಎಂದರು.
ಆದರೆ ರಾಜಣ್ಣ ಅವರು ಆಗಲೇ ಹೇಳಿದ್ದಾರೆ. ನೀನು ಮಂತ್ರಿ ಆಗ್ತಿಯಾ ಕಾಯಬೇಕು ಅಷ್ಟೇ ಅಂತ. ಕಾಯುವ ಹೊತ್ತಿಗೆ ಏನೇನ್ ಆಗುತ್ತೋ ಗೊತ್ತಿಲ್ಲ. ಅವರು ಮಂತ್ರಿಯಾಗಿ, ಜಿಲ್ಲಾ ಉಸ್ತುವಾರಿಯಾಗಿ ಜಿಲ್ಲೆಗೆ ಬರಲಿ, ಅವರಿಗೆ ದೇವರು ಒಳ್ಳೆಯದು ಮಾಡಲಿ, ಶಿವಲಿಂಗೇಗೌಡರು ಶ್ರಮ ಜೀವಿ ಅದರಲ್ಲಿ ಎರಡನೇ ಮಾತಿಲ್ಲ ಎಂದರು.