ಹೈಕಮಾಂಡ್ ಗೆ ಗೌರವ ಕೊಡದವರು ಬೇರೆ ಯಾರನ್ನು ಲೆಕ್ಕಕ್ಕೆ ತೆಗೆದುಕೊಳ್ತಾರೆ?; ಸಚಿವ ರಾಜಣ್ಣ ವಿರುದ್ಧ ವಾಗ್ದಾಳಿ ನಡೆಸಿದ ಬಿ.ಶಿವರಾಮು

ನಮ್ಮ ರಾಜ್ಯದವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ; ಅವರು ಮಲ್ಲಿಕಾರ್ಜುನ ಖರ್ಗೆಯವರಿಗೆ ಗೌರವ ಕೊಡಲ್ಲ

ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಮಾಜಿ ಸಚಿವ ಬಿ.ಶಿವರಾಮು ಪರೋಕ್ಷ ವಾಗ್ದಾಳಿ ನಡೆಸಿದರು.

ಹಾಸನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಜೆಡಿಎಸ್‌ನವರು ಅತ್ಯಂತ ಸಕ್ರಿಯವಾಗಿ ಪ್ರಚಾರದಲ್ಲೇ ತೊಡಗಿದ್ದಾರೆ. ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಸರಿಯಾಗಿ ಆಗುತ್ತಿಲ್ಲ ಎಂದು ಬೇಸರ ಹೊರ ಹಾಕಿದರು.

ನಾನು ಉಸ್ತುವಾರಿ ಸಚಿವರ ವಿರುದ್ಧ ಮಾತನಾಡಿಲ್ಲ, ವೈಯಕ್ತಿಕವಾಗಿ ಯಾರ ಬಗ್ಗೆಯೂ ನಾನು ಮಾತನಾಡಿಲ್ಲ. ಜಿಲ್ಲೆಯಲ್ಲಿ ನಮ್ಮ ಪಕ್ಷದ ಒಬ್ಬರೇ ಶಾಸಕರಿದ್ದಾರೆ. ಅವರ ಜತೆ ಸಚಿವರು ಜಿಲ್ಲಾಯಾದ್ಯಂತ ಓಡಾಡಿ ಸಂಘಟನೆ ಮಾಡಬಹುದಿತ್ತು.

ಆ ನಿಟ್ಟಿನಲ್ಲಿ ನಾನು ಮಾತನಾಡಿದ್ದೇನೆ. ರಾಜಣ್ಣ ಅವರ ಪ್ರಶ್ನೆಗೆ ನಾನು ಉತ್ತರ ಕೊಡಲ್ಲ. ಕಾಂಗ್ರೆಸ್‌ನ್ನು ಪೂಜ್ಯ ಭಾವನೆಯಲ್ಲಿ ಕಾಣುತ್ತೇವೆ. ಕೆ.ಎನ್.ರಾಜಣ್ಣ ಅವರು ನಾವು ಹೈಕಮಾಂಡ್ ಗುಲಾಮರಲ್ಲ ಎಂದಿದ್ದಾರೆ.

ಹೈಕಮಾಂಡ್‌ಗೆ ಗೌರವ ಕೊಡದವರ ಬಗ್ಗೆ ಏನು ಮಾತನಾಡಲು ಆಗುತ್ತದೆ. ಬೇರೆ ಯಾರು ಲೆಕ್ಕಕ್ಕೆ ಇರ್ತಾರೆ? ಜನರಿಗೆ ಗೌರವ ಕೊಡುವವರು, ಜನರಿಗೆ ಸ್ಪಂದಿಸುವವರು ನಾಯಕರು ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ನಮ್ಮ ರಾಜ್ಯದ ಒಬ್ಬರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಇವರು ಮಲ್ಲಿಕಾರ್ಜುನ ಖರ್ಗೆಯವರಿಗೆ ಗೌರವ ಕೊಡಲ್ಲ. ಅವರ ಬಗ್ಗೆ ಜನರು, ಪಕ್ಷದ ವರಿಷ್ಠರು ಅರ್ಥ ಮಾಡಿಕೊಳ್ಳಬೇಕು. ನಾನು ಸೋತಿದ್ದೇನೆ, ಅವರೂ ಸೋತಿದ್ದಾರೆ. ಅವರಿಗೂ ಆ ಪದ ಅನ್ವಯವಾಗಲ್ಲವಾ? ಎಂದು ಪ್ರಶ್ನಿಸಿದರು.

ನಮ್ಮ ರಾಜ್ಯದ ಒಬ್ಬರು ಎಐಸಿಸಿ ಅಧ್ಯಕ್ಷರಾಗಿದ್ದಾರೆ ಎಂದು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.