ಗ್ಯಾರೆಂಟಿಗಳಿಗೆ ಹಣ ಹೊಂದಿಸಲಾಗದೇ ರೇಷನ್ ಕಾರ್ಡ್ ರದ್ದು ಮಾಡುತ್ತಿರುವ ರಾಜ್ಯ ಸರ್ಕಾರ: ಮಾಜಿ ಸಚಿವ ಸುನಿಲ್ ಕುಮಾರ್ ವಾಗ್ದಾಳಿ

ಹಾಸನ : ರಾಜ್ಯ ಸರ್ಕಾರ ಗ್ಯಾರೆಂಟಿಗಳಿಗೆ ಹಣ ಹೊಂದಿಸಲಾಗದೆ 11 ಲಕ್ಷ ರೇಷನ್ ಕಾರ್ಡ್‌ಗಳನ್ನು ರದ್ದು ಮಾಡಿದೆ ಎಂದು ಮಾಜಿಸಚಿವ ಹಾಗೂ ಶಾಸಕ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಎಲ್ಲಾ ರೀತಿಯ ಹೋರಾಟಕ್ಕೆ ವಿರೋಧ ಪಕ್ಷವಾಗಿ ತಯಾರಿ ಮಾಡಿಕೊಂಡಿದ್ದೇವೆ.

ಇದು ಶೂನ್ಯ ಅಭಿವೃದ್ಧಿಯ, ದಲಿತ ವಿರೋಧಿ, ಹಗರಣಗಳ ಸರ್ಕಾರ ಈ ಮೂರು ವಿಷಯಗಳನ್ನು ಇಟ್ಟುಕೊಂಡು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ. ಜನಪರವಾದ ವಿಷಯಗಳನ್ನು ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳುತ್ತೇವೆ ಎಂದರು.

11 ಲಕ್ಷ ರೇಷನ್ ಕಾರ್ಡ್‌ಗಳನ್ನು ಇದವರೆಗೂ ರದ್ದು ಮಾಡಿದ್ದಾರೆ. ಇದರಿಂದಾಗಿ ಬಡವರು ಕೇಂದ್ರ, ರಾಜ್ಯ ಸರ್ಕಾರ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಆಯುಷ್ಮಾನ್ ಭಾರತ್, ಗೃಹಲಕ್ಷ್ಮಿ ಯೋಜನೆಯಿಂದಲೂ ವಂಚಿತರಾಗುತ್ತಾರೆ.

ಬಡವರ ಪರ ಎಂದು ಭಾಷಣ ಮಾಡಿ ರೇಷನ್ ಕಾರ್ಡ್ ರದ್ದು ಮಾಡಿದ ಸರ್ಕಾರ ಬಂದಿರುವುದು ಕರ್ನಾಟಕದ ಇತಿಹಾಸದಲ್ಲೇ ಇದೆ ಮೊದಲು. ವಿಧಾನಸಭೆ ಅಧಿವೇಶನದಲ್ಲಿ ಇದರ ಬಗ್ಗೆ ಹೋರಾಟ ಮಾಡುತ್ತೇವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಮುಖಂಡರಾದ ರೇಣುಕುಮಾರ್, ನಾಗೇಶ್, ಮೋಹನ್, ಅಮಿತ್ ಶೆಟ್ಟಿ ಮುಂತಾದವರಿದ್ದರು.