ಬೆಂಗಳೂರು: ಪ್ರಜ್ವಲ್ ದೆಹಲಿ ನಿವಾಸ ತೆರವು ಮಾಡಲು ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡಲು ಹೊರ ರಾಜ್ಯಗಳಿಗೆ ಪ್ರಯಾಣಿಸಲು ಅನುಮತಿ ನೀಡಬೇಕು ಎಂದು ಕೋರಿ ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಎಚ್.ಡಿ.ರೇವಣ್ಣ ಸಲ್ಲಿಸಿರುವ ಅರ್ಜಿಯನ್ನು, ‘ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಮಂಗಳವಾರ ವಿಚಾರಣೆ ನಡೆಸಿದರು.
‘ನಾನೊಬ್ಬ ಹಿರಿಯ ನಾಗರಿಕನಿದ್ದು, ನನ್ನ ಮನಸ್ಸು ಹಾತೊರೆದಾಗಲೆಲ್ಲಾ ನಾನು ಆತ್ಮಸಂತೋಷಕ್ಕಾಗಿ ದೇಗುಲಗಳಿಗೆ ಭೇಟಿ ನೀಡುತ್ತೇನೆ. ಆದರೆ, ನಮ್ಮ ಇಡೀ ಕುಟುಂಬ ಇಂದು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ದುರ್ದಿನಗಳನ್ನು ಎಣಿಸುತ್ತಿದೆ. ನಾನು ಜಾಮೀನಿನ ಮೇಲಿರುವ ಕಾರಣ ನನಗೆ ತಿರುಪತಿ ಮತ್ತು ತಿರುಚ್ಚಿ ದೇವಾಲಯಗಳಿಗೆ ಭೇಟಿ ನೀಡುವ ದಿಸೆಯಲ್ಲಿ ರಾಜ್ಯದಿಂದ ಹೊರಗೆ ಪ್ರಯಾಣಿಸಲು ಅನುಮತಿ ನೀಡಬೇಕು’ ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ವಿಚಾರಣೆ ವೇಳೆ ರೇವಣ್ಣ ಪರ ವಕೀಲ ಜಿ.ಅರುಣ್, ‘ಅರ್ಜಿದಾರರ ಪುತ್ರ ಪ್ರಜ್ವಲ್ ರೇವಣ್ಣ 2019ರಿಂದ 2024ರವರೆಗೆ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಈ ವೇಳೆ ಅವರಿಗೆ ದೆಹಲಿಯಲ್ಲಿ ನೀಡಲಾಗಿದ್ದ ಸರ್ಕಾರಿ ನಿವಾಸವನ್ನು ತೆರವುಗೊಳಿಸಲು ನೋಟಿಸ್ ನೀಡಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ಎಚ್.ಡಿ.ರೇವಣ್ಣ ಕೂಡಾ ಕೆಲವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಬೇಕಿದ್ದು ಅವರಿಗೆ ನೀಡಲಾಗಿರುವ ಜಾಮೀನಿನ ಷರತ್ತುಗಳನ್ನು ಸಡಿಲಿಸಬೇಕು’ ಎಂದು ಕೋರಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಅರ್ಜಿದಾರರು ತಾವು ಎಲ್ಲೆಲ್ಲಿ ಭೇಟಿ ನೀಡಲಿದ್ದಾರೆ ಎಂಬುದರ ಪ್ರವಾಸದ ಪಟ್ಟಿಯನ್ನೇ ನೀಡಿಲ್ಲ. ಅಂತೆಯೇ, ಸಂಸದರ ನಿವಾಸ ತೆರವುಗೊಳಿಸಬೇಕಾದವರು ಅವರ ಪುತ್ರ. ಇವರು ಹೇಗೆ ನಿವಾಸ ಖಾಲಿ ಮಾಡಲು ಅನುಮತಿ ಕೇಳುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು.