ಹಾಸನ: ಚನ್ನರಾಯಪಟ್ಟಣ ತಾಲೂಕು ಶ್ರೀನಿವಾಸಪುರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಆಗ್ರಹಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘದ ಅಡಿಯಲ್ಲಿ ನಡೆಯುತ್ತಿದ್ದ ಕಾರ್ಖಾನೆಯನ್ನು 2007-08 ರ ಅವಧಿಯಲ್ಲಿ ಖಾಸಗೀಕರಣ ಮಾಡಲಾಯಿತು.
ಆದರೆ ಕಾರ್ಖಾನೆಯ ಆಡಳಿತ ಮಂಡಳಿಗೆ 2010 ರಲ್ಲಿ ಚುನಾವಣೆ ನಡೆದಿದ್ದು ಬಿಟ್ಟರೆ ಈವರೆಗೂ ನಡೆದಿಲ್ಲ. ಒಂದಲ್ಲ ಒಂದು ಕಾರಣಕ್ಕೆ ವಿಳಂಬ ಆಗಿತ್ತು ಎಂದರು.
ಈ ನಡುವೆ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸುವಂತೆ ನಾನೂ ಹೈಕೋರ್ಟ್ನಲ್ಲಿ ಕೇಸ್ ಹಾಕಿದ್ದೆ. ವಿಚಾರಣೆ ನಡೆಸಿದ ನ್ಯಾಯಾಲಯ, ತೀರ್ಪು ನೀಡಿದ್ದು, ಆರು ತಿಂಗಳ ಒಳಗಾಗಿ ಚುನಾವಣೆ ನಡೆಸುವಂತೆ ಆದೇಶ ನೀಡಿದೆ.
ಹೀಗಾಗಿ ಜಿಲ್ಲಾಧಿಕಾರಿ ಹಾಗೂ ಕಾರ್ಖಾನೆಯ ಎಂಡಿ ಅವರು ಸಕಾಲಕ್ಕೆ ಚುನಾವಣೆ ನಡೆಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಸಾವಿರಾರು ಸಂಖ್ಯೆಯಲ್ಲಿ ಬೋಗಸ್ ಷೇರುದಾರರನ್ನು ಸೃಷ್ಟಿ ಮಾಡಲಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಚುನಾವಣೆ ನ್ಯಾಯಯುತವಾಗಿ ನಡೆಯಬೇಕು.
ಕಬ್ಬು ಪೂರೈಸುವ ಎಲ್ಲಾ ಷೇರುದಾರರ ಪಹಣಿ ಇರಬೇಕು, ಅರ್ಹ ಸದಸ್ಯರನ್ನು ಹೊರತು ಪಡಿಸಿ ಉಳಿದವರನ್ನು ವಜಾ ಮಾಡಿ ಎಂದು ಗೋಪಾಲಸ್ವಾಮಿ ಒತ್ತಾಯಿಸಿದರು.
ಎಲ್ಲಾ ಕಡೆಗಳಲ್ಲಿ ಸಾಲ ನೀಡಿದವರಿಂದ ಬಡ್ಡಿ ವಸೂಲಿ ಮಾಡಲಾಗುತ್ತಿದೆ. ಆದರೆ ಇಲ್ಲಿ ಆ ಸಂಪ್ರದಾಯ ಇಲ,ಅಲ್ಲಿಂದಲೂ ಕೂಡ ಬಡ್ಡಿ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು. ಹೈಕೋರ್ಟ್ ಆದೇಶ ನೀಡಿದ ನಂತರ ಆರು ತಿಂಗಳ ಒಳಗೆ ಚುನಾವಣೆ ನಡೆಸಬೇಕು. ಈಗಾಗಲೇ ಒಂದು ತಿಂಗಳು ಕಳೆದಿದ್ದು, ಕೂಡಲೇ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಶಿವರಾಂ, ಬ್ಲಾಕ್ ಕಾಂಗ್ರೆಸ್ ಮುಖಂಡ ಕಾರ್ತಿಕ್ ಇದ್ದರು.
ಟಿಕೆಟ್ ಘೋಷಣೆ ಗಡುವು
ಹಾಸನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲಿಸುವುದೇ ನಮ್ಮ ಗುರಿ. ಅದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಶೀಘ್ರವೇ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ನಾಳೆಯೇ ನಾನು, ಅರಸೀಕೆರೆ ಶಾಸಕರಾದ ಶಿವಲಿಂಗೇಗೌಡರು, ಮಾಜಿ ಸಚಿವ ಶಿವರಾಂ ಸೇರಿದಂತೆ ಸುಮಾರು ೨೦ಕ್ಕೂ ಹೆಚ್ಚು ಮುಖಂಡರು ಬೆಳಗಾವಿಗೆ ತೆರಳಿ ಸಿಎಂ, ಡಿಸಿಎಂ ಸೇರಿದಂತೆ ಪ್ರಮುಖ ನಾಯಕರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ತಿಳಿಸಿದರು.
ಯಾವುದೇ ಗೊಂದಲಕ್ಕೂ ಅವಕಾಶ ನೀಡಬಾರದು. ಯಾರಿಗೇ ಆಗಲಿ ಬೇಗ ಟಿಕೆಟ್ ನೀಡಬೇಕು. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಲು ಸಿದ್ದರಿದ್ದೇವೆ ಎಂದು ಗೋಪಾಲಸ್ವಾಮಿ ಹೇಳಿದರು.