ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಸೇಫ್ ಮಾಡ್ತಿದ್ದಾರೆ. ಎಸ್ಐಟಿ ತನಿಖೆ ಬಗ್ಗೆ ಅನುಮಾನವಿದೆ; ಕೆ.ಎಸ್.ಲಿಂಗೇಶ್

ಎಸ್ಐಟಿಗೆ ಸಿಗದ ಕಾರ್ತಿಕ್ , ವೀರಪ್ಪನ್ ನಂತೆ ಒಂದು ಮಾಧ್ಯಮಕ್ಕೆ ಮಾತ್ರ ಸಿಗುತ್ತಾನೆ| ಪ್ರಕರಣ ಸಿಬಿಐ ತನಿಖೆಗೆ ವಹಿಸಿ

ಹಾಸನ: ಪೆನ್ ಡ್ರೈವ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಕಾರ್ತಿಕ್‌ನನ್ನು ತಮ್ಮ ಬಳಿಯೇ ಇಟ್ಟುಕೊಂಡು ಇನ್ನೂ ಬೇರೆ ಆರೋಪ ಮಾಡಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂಬ ಅನುಮಾನ ಇದೆ ಎಂದು ಮಾಜಿಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಬೈಲ್‌ನಿಂದ ವಿಡಿಯೋ, ಫೋಟೋ ಕದ್ದಿರುವ ಕಾರ್ತಿಕ್‌ಗೌಡನನ್ನು ಇದುವರೆಗೂ ಬಂಧಿಸಿಲ್ಲ. ಇದರಿಂದ ಎಸ್‌ಐಟಿ ಮೇಲೆ‌ ನಮಗೆ ಅನುಮಾನ ಮೂಡುತ್ತಿದೆ ಎಂದರು.

ಪೊಲೀಸ್‌ಗೆ ಸಿಗದ ವೀರಪ್ಪನ್, ನಕ್ಕೀರನ್ ಪತ್ರಿಕೆಯ ಪತ್ರಕರ್ತರೊಬ್ಬರಿಗೆ ಮಾತ್ರ ಸಿಗುತ್ತಿದ್ದರು. ಅದೇ ರೀತಿ ಕಾರ್ತಿಕ್ ಒಂದು ಮಾಧ್ಯಮಕ್ಕೆ ಮಾತ್ರ ಸಿಗುತ್ತಾರೆ, ಎಸ್‌ಐಟಿಗೆ ಮಾತ್ರ ಸಿಗಲ್ಲ. ದೇವರಾಜೇಗೌಡರು ಡಿ.ಕೆ.ಶಿವಕುಮಾರ್ ಮೇಲೆ ಆರೋಪ ಮಾಡಿದರು. ಆಡಿಯೋಗಳನ್ನು ಬಿಡುಗಡೆ ಮಾಡಿದರು. ಈ ಕಾರಣಕ್ಕಾಗಿ ದೇವರಾಜೇಗೌಡರ ಧ್ವನಿಯನ್ನು ಅಡಗಿಸಿಲು ಇಲ್ಲಸಲ್ಲದ ಕೇಸ್‌ಗಳನ್ನು ಹಾಕಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕದ ಪೊಲೀಸ್ ಬಗ್ಗೆ ನಮಗೆ ಗೌರವವಿದೆ. ಎಸ್‌ಐಟಿ, ಪೊಲೀಸ್ ಇಲಾಖೆಗಳು ಸಿಎಂ, ಡಿಸಿಎಂ ಕೈಕೆಳಗೆ ಇವೆ. ಉಪಮುಖ್ಯಮಂತ್ರಿ ಸಿಡಿ ಶಿವಣ್ಣ ಅವರ ಕೈಕೆಳಗೆ ಈ ಸಂಸ್ಥೆ ಬರುವುದರಿಂದ ನ್ಯಾಯ ಸಿಗುಚಲವುದಿಲ್ಲ ಸರಿಯಾಗಿ ತನಿಖೆ ಆಗುವುದಿಲ್ಲ.

ಮುಖ್ಯಮಂತ್ರಿಗಳು ಎಲ್ಲೋ ಒಂದು ಕಡೆ ಅಡಿಯಾಳಾಗಿ ಡಿ.ಕೆ.ಶಿವಕುಮಾರ್ ಅವರನ್ನು ಸೇಫ್ ಮಾಡುತ್ತಿದ್ದಾರೆ. ಗೃಹಮಂತ್ರಿಗಳು ಇದರ ಬಗ್ಗೆ ಚಕಾರ ಎತ್ತಲ್ಲ. ಎಸ್‌ಐಟಿ ಸಿಡಿ ಶಿವಣ್ಣ ಅವರ ಕಂಟ್ರೋಲ್‌ನಲ್ಲಿ ಇದೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು.

ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಕೇಳಿಬಂದಿದ್ದು ಕೂಡಲೇ ಅವರ ರಾಜೀನಾಮೆ ಪಡೆಯಬೇಕು.ಅವರ ಮೇಲೆಯೂ ಎಸ್‌ಐಟಿ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

ಎಚ್.ಡಿ.ರೇವಣ್ಣ ಅವರಿಗೆ ಎರಡು ಪ್ರಕರಣಗಳಲ್ಲಿ ಜಾಮೀನು ಸಿಕ್ಕಿರುವುದು ನಮಗೆ, ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಮಾಧಾನ ತಂದಿದೆ. ಆದರೆ ಈ ಕೇಸ್‌‌ಗಳಿಂದ ರೇವಣ್ಣ ಅವರು ಕ್ಲೀನ್ ಚಿಟ್ ಪಡೆದು ಮುಕ್ತರಾಗಿ ಬಂದ ನಂತರ ನಮಗೆ ಖುಷಿ ಆಗುತ್ತದೆ.

ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ.
ರೇವಣ್ಣ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು, ದೇವರ ದಯೆಯಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ ಎಂದರು.