ಹಾಸನ: ನಮ್ಮ ಮೈತ್ರಿ ಆಗಿರುವುದು ದೆಹಲಿ ಮಟ್ಟದಲ್ಲಿ, ಹೀಗಾಗಿ ಇಲ್ಲಿ ಅಸಮಾಧಾನವಿರುವವರು ಇವತ್ತಿನ ಪರಿಸ್ಥಿತಿಯಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನೋಡಿ ಮನಸ್ಥಿತಿ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್- ಬಿಜೆಪಿ ಮೈತ್ರಿ ವಿರೋಧಿಸುತ್ತಿರುವ ಕಮಲ ಪಕ್ಷದ ಮುಖಂಡರಿಗೆ ಟಾಂಗ್ ನೀಡಿದರು.
ಅರಕಲಗೂಡು ತಾಲ್ಲೂಕಿನ, ಬಸವನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಮಾಡಿಕೊಳ್ಳಬೇಕು ಎಂದು ನಾನು ಹೋಗಿಲ್ಲ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಜನರ ಅಭಿಪ್ರಾಯ ಏನಿದೆ? ಅವರು ಏನು ಬಯಸುತ್ತಾರೋ ಅದನ್ನು ಮಾಡುತ್ತೇವೆ. ಜನಾಭಿಪ್ರಾಯಕ್ಕೆ ತಕ್ಕಂತೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅವರಿಂದ ವ್ಯಕ್ತವಾಗುತ್ತಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಎಚ್.ಡಿ.ಕೆ, ಅವರ ಭಾವನೆ ಅವರು ಹೇಳಿದ್ದಾರೆ.
ಬಿಜೆಪಿ ಹಿರಿಯ ನಾಯಕರ ಮೈತ್ರಿ ಆಗಬೇಕು ಎಂಬ ಭಾವನೆಗಳಿಂದ ತೀರ್ಮಾನ ಆಯ್ತು.
ನಮ್ಮ ವೈಯುಕ್ತಿಕ ಲಾಭಕ್ಕೆ ಮೈತ್ರಿ ಮಾಡಿಕೊಂಡಿಲ್ಲ, ಅಸಮಾಧಾನದಿಂದ ಮಾತನಾಡುವವರಿಗೆಲ್ಲಾ ನಾನು ಉತ್ತರ ಕೊಡಲ್ಲ. ಹಾಸನ ಜಿಲ್ಲೆಯಲ್ಲಿ ಜನ ಎಂದೂ ನಮ್ಮ ಕೈಬಿಟ್ಟಿಲ್ಲ, ಮೈತ್ರಿ ಇರುತ್ತೋ ಮೈತ್ರಿ ಇರಲ್ವೋ, ಎಲ್ಲಾ ಸಂದರ್ಭದಲ್ಲೂ ಈ ಜಿಲ್ಲೆಯ ಜನ ಜನತಾದಳವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಪಕ್ಷದ ಅಭಿಮಾನಿಗಳಿದ್ದಾರೆ, ಅವರ ಶ್ರಮ ಇದೆ. ಕರ್ನಾಟಕದಲ್ಲಿ ಹಾಸನ ಜಿಲ್ಲೆ, ಜೆಡಿಎಸ್‌ನ ಭದ್ರಕೋಟೆಯಾಗಿದೆ. ಈ ಚುನಾವಣೆಯಲ್ಲಿ ಜನತದಾಳದ ಅಭ್ಯರ್ಥಿಯನ್ನು ಗೆಲ್ಲಿಸುವ ತೀರ್ಮಾನ ಮಾಡ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ಸಣ್ಣಪುಟ್ಟ ಸಮಸ್ಯೆಗಳಿದ್ದಾವೆ, ಅವೆಲ್ಲವನ್ನೂ ಬಗೆಹರಿಸುತ್ತೇವೆ. ನೋಡೋಣ, ಸಮಾಜದಲ್ಲಿ ಅಸಾಧ್ಯ ಎನ್ನುವುದು ಯಾವುದು ಇಲ್ಲ, ಏನು ಬೇಕಾದರೂ ಆಗಬಹದು, ಸಮಯ, ಕಾಲ ಉತ್ತರ ಕೊಡುತ್ತೆ ಎಂದು ಮಾರ್ಮಿಕವಾಗಿ ನುಡಿದರು.
ಮಂಡ್ಯದಿಂದ ತಾವು ಸ್ಪರ್ಧಿಸಬೇಕು ಎಂಬ ಒತ್ತಡದ ಬಗ್ಗೆ ಮಾತನಾಡಿದ ಅವರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಎಲ್ಲಾ ಕಡೆ ಪ್ರೀತಿಯಿಂದ ಹೇಳ್ತಾರೆ. ನಾನು ಕರ್ನಾಟಕ ಬಿಟ್ಟು ಹೋಗಲ್ಲ, ರಾಜ್ಯ ರಾಜಕಾರಣದಲ್ಲೇ ಇರ್ತೀನಿ. ಸದ್ಯಕ್ಕೆ ರಾಜ್ಯದ ಕೆಲಸ ಮುಗಿಯಲಿ, ರಾಜ್ಯದ ಜನತೆಯ ಹಲವಾರು ಸಮಸ್ಯೆಗಳಿವೆ. ಆ ಸಮಸ್ಯೆಗಳಿಗೆ ಮೊದಲು ಪರಿಹಾರ ದೊರಕಬೇಕು ಎಂದರು.
ಹಾಸನದಲ್ಲಿ ಜನತಾದಳದ ಅಭ್ಯರ್ಥಿ, ಮೈತ್ರಿಯ ಎನ್‌ಡಿಎ ಅಭ್ಯರ್ಥಿಯೇ ಇರ್ತಾರೆ. ದೆಹಲಿಯಲ್ಲಿ ನಮ್ಮ ಹೈಕಮಾಂಡ್ ದೇವೇಗೌಡರೊಂದಿಗೆ ನಾವೆಲ್ಲಾ ಕುಳಿತು ಚರ್ಚೆ ಮಾಡ್ತಿವಿ, ಚರ್ಚೆ ಮಾಡಿ ಅಭ್ಯರ್ಥಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ದೇವೇಗೌಡರು ನಮ್ಮ ಪಕ್ಷದ ಹೈಕಮಾಂಡ್, ಅವರು ಈಗಾಗಲೇ ಅವರ ಭಾವನೆ ಹೇಳಿದ್ದಾರೆ. ಹೀಗೆ ಆಗುತ್ತೆ, ಹಾಗೇ ಆಗುತ್ತೆ ಅಂತ ಹೇಳಲು ಆಗಲ್ಲ. ಈಗ ಮೈತ್ರಿಯ ವಾತಾವರಣ ಏನಿದೆ ಎಲ್ಲರ ಅಭಿಪ್ರಾಯ ತಗೊಂಡು ತೀರ್ಮಾನ ಮಾಡುತ್ತೇವೆ ಎಂದರು.
ಮಾಜಿಶಾಸಕ ಎ.ಟಿ.ರಾಮಸ್ವಾಮಿ ಅವರ ಬಗ್ಗೆ ಏಕೆ ಚರ್ಚೆ ಮಾಡೋಣ? ಅವರು ನಮಗಿಂತ ದೊಡ್ಡವರಿದ್ದಾರೆ, ಬುದ್ದಿವಂತರಿದ್ದಾರೆ. ಅವರು ಹೇಳೋದನ್ನು ಸರಿಪಡಿಸೋದು ಹೇಗೆ ಅಂತ ನೋಡೋಣ. ಅವರಿಗೆ ಏಕೆ ಉತ್ತರ ಕೊಡಬೇಕು? ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿದರು.
ಯಾರೂ ಲೆಕ್ಕಕ್ಕಿಲ್ಲ ಅಂತ ನಾನು ಹೇಳಲ್ಲ, ಯಾರ ಬಗ್ಗೆನೂ ದುರಂಹಕಾರದಿಂದ ಮಾತನಾಡಲ್ಲ. ನಮಗೆ ಎಲ್ಲರೂ ಬೇಕು, ಇವತ್ತಿನ ಪರಿಸ್ಥಿತಿಯಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನೋಡಿ ಅವರು ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು ಎಂದರು.