ಹಾಸನ: ಜಿ.ಪುಟ್ಟಸ್ವಾಮಿಗೌಡ ಅವರು ನೀರಾವರಿ ಮಂತ್ರಿಯಾಗಿದ್ದ ವೇಳೆ ಅವರು ಕಾವೇರಿ ನೀರು ಕೇಳಲು ಬೆಂಗಳೂರಿಗೆ ಬಂದಿದ್ದ ತಮಿಳುನಾಡಿನ ಸಚಿವರನ್ನು ಭೇಟಿಯಾಗದೇ ಹೊಳೆನರಸೀಪುರಕ್ಕೆ ಬಂದು ಕುಳಿತರು. ಅದರ ಪರಿಣಾಮವಾಗಿ ಕಾವೇರಿ ನ್ಯಾಯಮಂಡಳಿ ರಚನೆಯಾಗಿ ರಾಜ್ಯ ಅನ್ಯಾಯಕ್ಕೆ ಒಳಗಾಯಿತು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ದಿವಂಗತ ಜಿ.ಪುಟ್ಟಸ್ವಾಮಿಗೌಡ ಅವರ ವಿರುದ್ಧ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು.
ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕಾವೇರಿ ವಿವಾದ ನ್ಯಾಯಾಲಯದ ಮೆಟ್ಟಿಲೇರಲು, ನ್ಯಾಯಮಂಡಳಿ ರಚನೆಯಾಗಲು ಜಿ.ಪುಟ್ಟಸ್ವಾಮಿಗೌಡ ಅವರು ನೀರಾವರಿ ಸಚಿವರಾಗಿದ್ದ ಅವಧಿಯಲ್ಲಿನ ನಡವಳಿಕೆಯೇ ಕಾರಣ ಎಂದು ಅವರ ಹೆಸರು ಪ್ರಸ್ತಾಪಿಸದೇ ಗಂಭೀರ ಆರೋಪ ಮಾಡಿದರು.
ನಮ್ಮ ತಂದೆಯ ಜೊತೆಯಲ್ಲಿ ಬೆಳೆದುಕೊಂಡು ಬಂದಿದ್ದ ವ್ಯಕ್ತಿ ಅವರಿಗೆ ವಿರುದ್ಧವಾದರು. ಇದೇ ಕಾರಣಕ್ಕಾಗಿ ಅವರಿಗೆ ಟಿಕೆಟ್ ಕೊಟ್ಟು ಚುನಾವಣೆಗೆ ನಿಲ್ಲಿಸಿದರು. ಜನರು ಅವರನ್ನು ಗೆಲ್ಲಿಸಿದರು. ಅದರ ಪರಿಣಾಮ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿಲ್ಲ.
ದೇವೇಗೌಡರ ವಿರೋಧಿ ಎನ್ನುವ ಒಂದೇ ಕಾರಣಕ್ಕಾಗಿ ಅವರನ್ನು ನೀರಾವರಿ ಸಚಿವರಾಗಿ ಮಾಡಿದರು. ಆಮೇಲೆ ಅನಾಹುತ ಇಲ್ಲಿಗೆ ಬಂದು ನಿಂತಿತು. ಆ ನೀರಾವರಿ ಮಂತ್ರಿಯನ್ನು ಭೇಟಿಯಾಗಿ ತಮಿಳುನಾಡಿಗೆ ಕಾವೇರಿ ನೀರು ಕೇಳಲು ಅಲ್ಲಿನ ಒಬ್ಬ ಮಂತ್ರಿ ಬೆಂಗಳೂರಿಗೆ ಬಂದರು.
ಆದರೆ ಆ ನೀರಾವರಿ ಮಂತ್ರಿ, ತಮಿಳುನಾಡಿನ ಸಚಿವರನ್ನು ಭೇಟಿಯಾಗದೆ ಹೊಳೆನರಸೀಪುರಕ್ಕೆ ಬಂದು ಕುಳಿತರು. ಅದರ ಪರಿಣಾಮವಾಗಿ ಮುಂದೆ ಕಾವೇರಿ ನ್ಯಾಯಮಂಡಳಿ ರಚನೆಯಾಯಿತು. ಅಂತಹ ವ್ಯಕ್ತಿಯನ್ನು ಜನರು ಗೆಲ್ಲಿಸಿದ್ದರು. ಮತ್ತೆ ಇಂತಹ ಅನಾಹುತ ಈ ನಾಡಿನಲ್ಲಿ ಆಗಬಾರದು ಎಂದರು.
ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ದೇವೇಗೌಡರು ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ ಎಂದರು.