ಭ್ರಷ್ಟ ಕಾಂಗ್ರೆಸ್ ಸರ್ಕಾರ ತೆಗೆಯಲು ಎಲ್ಲ 28 ಲೋಕಸಭಾ ಕ್ಷೇತ್ರ ಗೆಲ್ಲಬೇಕಿದೆ, ಮೈತ್ರಿ ಸೀಟು ಎಷ್ಟು ಎನ್ನುವುದು ಮುಖ್ಯವಲ್ಲ: ಎಚ್.ಡಿ.ಕೆ.

ಹಾಸನ ಜಿಲ್ಲೆಯಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು. ಸಣ್ಣಪುಟ್ಟ ಸಮಸ್ಯೆಗಳಿವೆ, ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ.

ಹಾಸನ: ಜೆಡಿಎಸ್-ಬಿಜೆಪಿ ಮೈತ್ರಿಯಡಿ ಎಷ್ಟು ಸೀಟುಗಳು ನಮಗೆ ಹಂಚಿಕೆ ಎನ್ನುವುದು ಮುಖ್ಯವಲ್ಲ ಈ ಭ್ರಷ್ಟ ಸರ್ಕಾರ ತೆಗೆಯಬೇಕು ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಸ್ಥಾನ ಗೆಲ್ಲಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ, ಚನ್ನಂಗಿಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರ ರಾಜ್ಯದ ನಡುವೆ ವಾಗ್ದಾಳಿ ನಡೆಯುತ್ತಿದೆ.ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಇಂದಿನಿಂದ ಜಂಟಿ ಅಧಿವೇಶನ ಆರಂಭವಾಗುತ್ತದೆ. ಫೆ.16ಕ್ಕೆ ಬಜೆಟ್ ಮಂಡನೆಗರ ಸಮಯ ನಿಗದಿ ಮಾಡಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಮಾತನಾಡಲು ತೀರ್ಮಾನ ಮಾಡಿದ್ದೇನೆ. ಅಂಕಿ-ಅಂಶಗಳನ್ನಿಟ್ಟುಕೊಂಡು ಚರ್ಚೆ ಮಾಡುತ್ತೇನೆ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಟ್ಯಾಕ್ಸ್ ಹಣ ಕೊಡುವ ಈ ಪದ್ಧತಿ ಪ್ರಾರಂಭ ಆಗಿದ್ದು ಯಾವಾಗ? ಈಗ ದೊಡ್ಡಮಟ್ಟದಲ್ಲಿ ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ.
ಈ ರಾಜ್ಯದಲ್ಲಿ ದಾಖಲೆಯ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿಗಳು ನೀವೇ, ಈಗ ಕೇಂದ್ರ ಸರ್ಕಾರದಿಂದ ಅನ್ಯಾಯ ಆಗಿದೆ ಎಂದು ಹೇಳಿತ್ತಿದ್ದೀರಿ ಎಂದು ಕುಟುಕಿದರು.

1952ರಲ್ಲಿ ಸಂವಿಧಾನದಲ್ಲಿ ಸಂಸ್ಥೆಯನ್ನು ಪ್ರಾರಂಭ ಮಾಡಿದರು. ಅಲ್ಲಿಂದ ಚರ್ಚೆ ಮಾಡಲು ಹೋದರೆ ದೊಡ್ಡ ಕಥೆಯಿದೆ.
ಎನ್‌ಡಿಆರ್‌ಎಫ್‌‌ನಿಂದ ಬಿಡಿಗಾಸು ಕೊಟ್ಟಿಲ್ಲ ಅಂತಾರೆ, ಇವರಿಗೆ ರಾಜಕೀಯ ಗೊತ್ತಿಲ್ಲದೆ ಇದೆಯಾ? ವಿಶೇಷ ಅನುದಾನ ಕೆಲವು ಬಾರಿ ಕೊಟ್ಟಿದ್ದಾರೆ ಎಂದರು.

ಮೈತ್ರಿ ಸೀಟು ಹಂಚಿಕೆ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್‌ನ ದುರಾಡಳಿತ ತೆಗೆಯಬೇಕು, ಈಗ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದಾರೆ, ಇವರು ಸಾಕ್ಷಿ ಕೊಡಲಿ ಅನ್ನುತ್ತಾರೆ. ಅವರ ಪಕ್ಷದ ಮಾಜಿ ಸಚಿವರೇ ಬೆಳಿಗ್ಗೆ ಡಂಗುರ ಹೊಡೆಯುತ್ತಿದ್ದಾರೆ. ಇದೇ ಕೆಂಪಣ್ಣನ ಹೇಳಿಕೆ ಇಟ್ಕಂಡು ಪೇ ಸಿಎಂ ಎಂದು ಪೋಸ್ಟರ್ ಅಂಟಿಸಿದರು ಎಂದು ಟೀಕಿಸಿದರು.

ಲೋಕಸಭೆ ಚುನಾವಣೆ ಸಂಬಂಧ ಮಂಡ್ಯದ್ದು ಪ್ರತಿ ದಿನ ಒಂದು ಧಾರಾವಾಹಿ ಇರಲೇಬೇಕು ಎನ್ನುವಂತಾಗಿದೆ. ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಮುಗಿಸಲೇಬೇಕು ಎಂದು ಯಾವ ರೀತಿ ರಾಜಕೀಯ ಮಾಡಿದರು ಎನ್ನುವುದು ಗೊತ್ತಿದೆ. ಪಾಪ ಅವನು ಅಮಾಯಕ ಎಂದರು.

ಈ ಜಿಲ್ಲೆಯಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು. ಸಣ್ಣಪುಟ್ಟ ಸಮಸ್ಯೆಗಳಿವೆ, ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ.
ನರೇಂದ್ರಮೋದಿಯವರು ಮೂರನೇ ಬಾರಿ ಪ್ರಧಾನಮಂತ್ರಿ ಆಗುವುದನ್ನು ಯಾರೂ ತಪ್ಪಿಸಲು ಆಗಲ್ಲ‌ ಎಂದರು.