ಹಾಸನ: ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ಸರ್ಕಾರ ನಡೆಸುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಹಾಸನ ತಾಲ್ಲೂಕಿನ, ಮಾರನಾಯಕಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದಾರೆ. ಅವರ ಪ್ರತಿಕ್ರಿಯೆ ನೋಡಿದ್ದೇನೆ, ಕಳೆದ ಎರಡು ತಿಂಗಳಿನಿಂದ ಅವರು ನಡೆದುಕೊಳ್ಳುತ್ತಿರುವುದು ನೋಡಿದ್ರೆ ನೂರು ಸುಳ್ಳನ್ನು ಹೇಳಿ ಒಂದು ಸತ್ಯ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಗ್ಯಾರೆಂಟಿಗಳ ಹೆಸರಿನಿಲ್ಲಿ ನಾಡಿನ ಜನತೆಯ ಹಣವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಅದು ಎಷ್ಟು ದಿನ ನಡೆಯುತ್ತೆ ನೋಡೋಣ, ಕೇಂದ್ರ ಸರ್ಕಾರ ಸಾಲ ಮಾಡಿದೆ ಎನ್ನುತ್ತಿದ್ದರು. ಇವತ್ತು ಎಷ್ಟು ಸಾಲ ಇದೆ, ಈಗ ಎಲ್ಲಿಗೆ ತೆಗೆದುಕೊಂಡು ಹೋಗಿದ್ದೀರಿ? ಒಂದು ಲಕ್ಷದ ಐದು ಸಾವಿರ ಕೋಟಿ ಸಾಲ ಮಾಡಿದ್ದೀರಿ ಎಂದು ದೂರಿದರು.
ಈ ಸಾಲವನ್ನು ನೀವು ತೀರಿಸಲ್ಲ ಜನರೇ ತೀರಿಸಬೇಕು, ನೀವು ಬಹಳ ಪ್ರವೀಣರು ಎಂದು ನನಗೆ ಗೊತ್ತಿದೆ, ನಿಮ್ಮ ಪ್ರತಿಕ್ರಿಯೆ ನೋಡಿದ್ರೆ ಯಾವಾನಾದ್ರೂ ನಗ್ತಾನೆ. ಸಾಲದ ಹೊರೆ ಹೊರಿಸಿ, ಸ್ವೇಚ್ಛಾಚಾರವಾಗಿ ಆಡಳಿತ ನಡೆಸುತ್ತಿದ್ದೀರೆ ಎಂದು ಟೀಕಿಸಿದರು.
ಇವರು ಯಾರ ಪರವಾಗಿ ಇದ್ದಾರೆ ಯಾರಪ್ಪನ ಮನೆ ದುಡ್ಡಿನಿಂದ ಗ್ಯಾರೆಂಟಿ ಕೊಡ್ತಿದ್ದೀರಿ, ಅದಕ್ಕೆ ಎಷ್ಟು ಸಾಲ ಮಾಡಿದ್ದೀರಿ? ಏಳು ಕೋಟಿ ಜನರ ಮೇಲೆ ಸಾಲದ ಹೊರೆ ಹೊರಿಸುತ್ತಿದ್ದೀರಿ, ಒಂದು ರೂಪಾಯಿಗೆ ಎಷ್ಟು ಖರ್ಚು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ನಿಮ್ಮವರೇ 40, 50% ಕಮಿಷನ್ ಅಂತ ಜಾಗಟೆ ಹೊಡೆಯುತ್ತಿದ್ದಾರೆ. ನೀವು ಹಗಲು ದರೋಡೆ ಮಾಡುವವರ ಪರವಾಗಿ ಇದ್ದೀರಿ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.