ಪ್ರಜ್ವಲ್ ನನ್ನ ಮಗ: ನಾನೇ ಅಭ್ಯರ್ಥಿ ಎಂದು ಭಾವಿಸಿ ಗೆಲ್ಲಿಸಿ ಕೊಡಿ, ತಪ್ಪು ಮಾಡಿದ್ದರೆ ತಿದ್ದಿಕೊಳ್ಳುತ್ತೇವೆ: ಪಕ್ಷದ ಶಾಸಕರು-ಮುಖಂಡರ ಸಭೆಯಲ್ಲಿ ಕುಮಾರಸ್ವಾಮಿ ಭಾವುಕ ಭಾಷಣ

ಮಂಡ್ಯದಲ್ಲಿ ನನ್ನ ಮಗನಿಗೆ ಆದಂತೆ, ಹಾಸನದಲ್ಲಿ ನನ್ನ ಸಹೋದರ ಮಗನಿಗೆ ಆಗಬಾರದು.

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರೇ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಖಚಿತಪಡಿಸಿದರು.

ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಪ್ರಜ್ವಲ್, ರೇವಣ್ಣನ ಮಗ ಅಲ್ಲ, ಅವನು ನನ್ನ ಮಗ, ಬಹಳಷ್ಟು ಬದಲಾವಣೆ ತರ್ತೀನಿ, ಅವನೂ ಬದಲಾಗುತ್ತಾನೆ. ಎಲ್ಲಾ ರೀತಿಯ ಬದಲಾವಣೆ ತರಲು ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ಮಂಡ್ಯದಲ್ಲಿ ನನ್ನ ಮಗನಿಗೆ ಆದಂತೆ, ಹಾಸನದಲ್ಲಿ ನನ್ನ ಸಹೋದರ ಮಗನಿಗೆ ಆಗಬಾರದು. ದಯವಿಟ್ಟು ಅವನನ್ನು ಉಳಿಸಿಕೊಳ್ಳಿ ಎಂದು ಮನವಿ ಮಾಡಿದರು.

ಬಿಜೆಪಿಯ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ಈ ಹಿಂದೆ ಕಾಂಗ್ರೆಸ್‌ನವರು ಕತ್ತು ಕೊಯ್ದರು. ದೇವೇಗೌಡರ ಹೆಸರು ಉಳಿಸಲು ಮೈತ್ರಿ ಮಾಡಿಕೊಂಡಿದ್ದೇನೆ. ಯಾರೂ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ ಎಂದರು.

ಇವತ್ತು ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಅಲ್ಲ, ನಾನೇ ಅಭ್ಯರ್ಥಿ ಎಂದ ಕುಮಾರಸ್ವಾಮಿ, ಈ ಜಿಲ್ಲೆಗೆ ನಾನು ಕಿಂಚಿತ್ತು ಸೇವೆ ಮಾಡಿದ್ದೇನೆ.‌ ನನ್ನಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಕಾಣಿ.
ಈ ಚುನಾವಣೆ ನಮ್ಮ ಪಕ್ಷಕ್ಕೆ ಸತ್ವ ಪರೀಕ್ಷೆ. ದಯವಿಟ್ಟು ನಮ್ಮನ್ನು ಕೈಬಿಡಬೇಡಿ, ಈ ಪಕ್ಷ ಉಳಿಸಿಕೊಡಿ ಎಂದು ಮನವಿ ಮಾಡಿದರು.

ನಾನು ಅಷ್ಟು ಬೇಗ ಸಾಯಲ್ಲ, ದೇವರು ಶಕ್ತಿ ಕೊಡ್ತಾನೆ. ಈ ದೇಹ ಮಣ್ಣಿಗೆ ಹೋಗುವವರೆಗೂ ಯಾವುದೇ ಜಾತಿ ನೋಡದೆ ಜನರ ಸೇವೆ ಮಾಡ್ತೀನಿ ಎಂದು ಭಾವುಕರಾಗಿ ನುಡಿದರು.

ದೇವೇಗೌಡರು ಮೊಮ್ಮಗನ ಮೇಲೆ ದೊಡ್ಡ ಕನಸು ಕಂಡು ಈ ಸ್ಥಾನ ಬಿಟ್ಟು ಕೊಟ್ಟರು. ವಯಸ್ಸಿನ ಕೊರತೆಯಿಂದ ತಪ್ಪು ಆಗಿರಬಹುದು. ತಿದ್ದಿಕೊಳ್ಳೋ ಗುಣ ಬೇಕು. ತಪ್ಪಾಗಿದ್ದರೆ ತಿದ್ದುಕೊಳ್ತೇನೆ ಎಂದು ಜನರನ್ನು ಕೇಳು ಎಂದು ಪ್ರಜ್ವಲ್‌ಗೆ ಸಲಹೆ ನೀಡಿದರು.

ನಾವು ಬಿಜೆಪಿ ಜೊತೆ ಹೋಗಿರೋದಕ್ಕೆ ಮುಸ್ಲಿಂ ಸಮುದಾಯಕ್ಕೆ ಅಸಮಾಧಾನ ಇರಬಹುದು. ಮುಸ್ಲಿಂ ಸಮುದಾಯದವರ ಶಾಲಾ ಕಟ್ಟಡಕ್ಕೆ ಕೇಂದ್ರ ಸರ್ಕಾರ ೨೮೦ ಕೋಟಿ ರೂ. ಕೊಟ್ಟಿದೆ ಎಂದು ಜಮೀರ್ ಅಹಮದ್ ಹೇಳಿದಾರೆ. ಇದನ್ನ ಅರ್ಥ ಮಾಡಿಕೊಳ್ಳಿ ಎಂದರು.

ಮಾ.೨೧ ಕ್ಕೆ ನನಗೆ ಆಪರೇಷನ್ ಆಗುತ್ತೆ. ಅಮೆರಿಕದಿಂದ ವೈದ್ಯರು ಬರ್ತಾರೆ. ಆಪರೇಷನ್ ಆದ ಬಳಿಕ ಮೂರೇ ದಿನ ರೆಸ್ಟ್ ಮಾಡಿ ನಮ್ಮ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಕುಮಾರಸ್ವಾಮಿ ಹೇಳಿದ್ದೇನು:
ನಮ್ಮ ಸಾಧನೆ, ಈ ಜಿಲ್ಲೆಗೆ ಕೊಟ್ಟಿರುವ ಕೊಡುಗೆ ಹೇಳಿ ನಮ್ಮ ಬೆನ್ನು ತಟ್ಟಿಕೊಳ್ಳಲು ಸಭೆ ಕರೆದಿಲ್ಲ. ಜಿಲ್ಲೆಯ ಜನರು ನಮಗೆ ಶಕ್ತಿ ಕೊಟ್ಟಿದ್ದಾರೆ, ನಿಮ್ಮಗಳ ಋಣ ನಮ್ಮ ಮೇಲಿದೆ, ಅದನ್ನು ತೀರಿಸಬೇಕು. ದೇವೇಗೌಡರು ೯೧ ನೇ ವಯಸ್ಸಿನಲ್ಲಿ ನಡೆಯಲು ಸಮಸ್ಯೆ ಇದ್ದರೂ ರಾಜ್ಯಸಭೆಯಲ್ಲಿ ನೀರಾವರಿ, ಕೊಬ್ಬರಿ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದಾರೆ.

ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತಿದ್ದೇವೆ.
ಶ್ರೀರಾಮದೇವರ ಕಟ್ಟೆಯಲ್ಲಿ ದೇವೇಗೌಡರು ಮೊದಲ ಸಭೆ ಮಾಡಿದ್ರು, ಅಲ್ಲಿ ಪ್ರಜ್ವಲ್ ಅವರೇ ಅಭ್ಯರ್ಥಿ ಎಂದು ಪ್ರಕಟ ಮಾಡಿದರು. ಜಿಲ್ಲೆಯ ಒಳಗೆ, ಹೊರಗೆ ಏನು ಚರ್ಚೆ ನಡೆಯುತ್ತಿದೆ ಎಂದು ಗಮನಿಸುತ್ತಿದ್ದೇನೆ. ರಾಜ್ಯ ಸರ್ಕಾರ ನಿತ್ಯವೂ ಗ್ಯಾರಂಟಿ ಸಮಾವೇಶ ಮಾಡುತ್ತಿದೆ.

ಪ್ರತಿದಿನ ಪ್ರಚಾರಕ್ಕೆ ಕೋಟ್ಯಂತರ ರೂ.ಖರ್ಚು ಮಾಡುತ್ತಿದ್ದಾರೆ. ಆದರೆ ರಾಜ್ಯದ ೭೬೦೦ ಹಳ್ಳಿಗಳಲ್ಲಿ ಅಂತರ್ಜಲ ಕುಸಿದಿದೆ, ಕುಡಿಯುವ ನೀರಿಗೆ ಹಾಹಾಕಾರವಿದೆ. ಸರ್ಕಾರ ಈ ವರ್ಷ ೧ ಲಕ್ಷದ ೫ ಸಾವಿರ ಕೋಟಿ ಸಾಲ ಮಾಡಿದ್ದಾರೆ. ಯಾರಪ್ಪನ ದುಡ್ಡಿನಲ್ಲಿ ಜಾಹೀರಾತು ಕೊಡ್ತಿದ್ದೀರಾ, ನಾನು ೨೫ ಸಾವಿರ ಕೋಟಿ ಸಾಲ ಮನ್ನಾ ಮಾಡಲು ಹಣ ಹೊಂದಿಸಿದ್ದೇನೆ.

ಎರಡು ಬಾರಿ ಇನ್ನೊಬ್ಬರ ಹಂಗಿನ ಸರ್ಕಾರ ನನ್ನದು. ಆದರೂ ಕೇಂದ್ರ ಸರ್ಕಾರ ನಮಗೆ ದುಡ್ಡು ಕೊಡ್ತಿಲ್ಲ ಅಂತ ನಾನು ಜಂತರ್ ಮಂತರ್ ಮುಂದೆ ಪ್ರತಿಭಟನೆ ಮಾಡಲಿಲ್ಲ. ನಾನೇ ಸಾಲಮನ್ನಾ ಮಾಡಲು ಹಣ ಹೊಂದಿಸಿದೆ. ನಿಮ್ಮ ತೆರಿಗೆ ಹಣ ಅದು. ನಿಮ್ಮ ತೆರಿಗೆ ಹಣ ನಿಮಗೆ ಸಾಲಮನ್ನಾ ಮಾಡಿದ್ದೇನೆ ಎಂದರು.