ಹಾಸನ: ಕಳೆದ ಸೋಮವಾರ ಕಾಡಾನೆ ತುಳಿತಕ್ಕೆ ಬಲಿಯಾದ ಬೇಲೂರು ತಾಲೂಕು ಗೂಜ್ಜೆನಹಳ್ಳಿ ಗ್ರಾಮದ ಅನಿಲ್ ಅರಸು ಮನೆಗೆ ಇಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಅನಿಲ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಮಾತನಾಡಿದ ಸಚಿವರು, ಕಳೆದ ಹಲವು ವರ್ಷಗಳಿಂದ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ನಾನು ಸಚಿವನಾದ ಬಳಿಕ ಹಾಸನಕ್ಕೆ ಕಾಡಾನೆ ಸಮಸ್ಯೆ ಹಿನ್ನೆಲೆಯಲ್ಲಿ ನಾಲ್ಕು ಬಾರಿ ಬಂದಿದ್ದೇನೆ.
ಬೇಲೂರು ತಾಲ್ಲೂಕಿನಲ್ಲಿ ಈ ತಿಂಗಳಲ್ಲಿ 2 ಸಾವು ಉಂಟಾಗಿರುವುದು ನೋವು ತಂದಿದೆ.ಈ ಬಗ್ಗೆ ಸ್ಥಳೀಯ ಶಾಸಕರಾದ ಸುರೇಶ್ ಮತ್ತು ಸಂಸದರು ಗಮನ ಸೆಳೆದಿದ್ದಾರೆ. ಹಾಸನ ಜಿಲ್ಲೆಯಲ್ಲಿ 100 ಕಾಡಾನೆಗಳಿವೆ. ಅವುಗಳಲ್ಲಿ ನಾಲ್ಕು ಪುಂಡಾನೆಗಳಿವೆ ಎಂದು ಅರಣ್ಯ ಇಲಾಖೆ ವರದಿ ನೀಡಿದೆ. ಶೀಘ್ರವೇ ಪುಂಡಾನೆಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲು ಸನ್ನದ್ದವಾಗಿದ್ದೇವೆ.
ಚಿಕ್ಕಮಗಳೂರು, ಹಾಸನ ಮತ್ತು ಮಡಿಕೇರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಆನೆ ಹಾವಳಿ ನಿಯಂತ್ರಣಕ್ಕೆ ಎರಡು ಸಾವಿರ ಹೆಕ್ಟೇರ್ ಭೂಮಿ ಮೀಸಲಿಟ್ಟಿದೆ. ಈ ಬಾರಿ ಬಜೆಟ್ 100 ಕೋಟಿ ರೂ. ನಿರೀಕ್ಷಿಸಲಾಗಿದೆ ಎಂದರು.
ಕಾಡಾನೆ ಸಮಸ್ಯೆಯಿಂದ ಶಾಶ್ವತ ಪರಿಹಾರಕ್ಕೆ ಸರ್ಕಾರ ಹತ್ತಾರು ಯೋಜನೆ ರೂಪಿಸಿದೆ. ಹಿಂದಿನ ಸರ್ಕಾರ ಆನೆಗಳ ಹಾವಳಿ ನಿಯಂತ್ರಣಕ್ಕೆ ರೂ. 10 ಕೋಟಿ ವೆಚ್ಚ ಮಾಡಿತ್ತು. ನಮ್ಮ ಸರ್ಕಾರ ರೂ.34 ಕೋಟಿ ವೆಚ್ಚ ಮಾಡಿ ರೈಲ್ವೆ ಕಂಬಿಗಳ ಬೇಲಿ ಹಾಕಿದೆ. ಸರ್ಕಾರ ಯಾವ ಕಾರಣಕ್ಕೂ ಕಣ್ಣು ಒರೆಸುವ ಕೆಲಸ ಮಾಡುತ್ತಿಲ್ಲ. ನಮ್ಮ ಸಿಬ್ಬಂದಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅರಣ್ಯ ಹೊರ ಗುತ್ತಿಗೆದಾರರಿಗೆ ಹೆಚ್ಚುವರಿ 2 ಸಾವಿರ ರೂ. ಬಡ್ತಿ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸರ್ಕಾರದಿಂದ ಮೃತರ ಕುಟುಂಬಕ್ಕೆ ಸದ್ಯ ರೂ.15 ಲಕ್ಷ ನೀಡಿದೆ. ಇನ್ನೂ ಹೆಚ್ಚಿನ ಪರಿಹಾರ ನೀಡಲಾಗುತ್ತದೆ ಎಂದರು.
ಸಚಿವರ ಭೇಟಿ ವೇಳೆ ಸಂಸದ ಶ್ರೇಯಸ್ ಪಟೇಲ್, ಬೇಲೂರು ಶಾಸಕ ಎಚ್.ಕೆ.ಸುರೇಶ್ ಮತ್ತು ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಶೃಂಗೇರಿ ಶಾಸಕ ರಾಜೇಗೌಡ, ಮಾಜಿ ಸಚಿವ ಬಿ.ಶಿವರಾಂ. ಮುಖಂಡ ಗ್ರಾನೈಟ್ ರಾಜಶೇಖರ,ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಳು ಕುಂಡಲ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಹಾಜರಿದ್ದರು.