ಅರ್ಜುನ ಸಾವಿಗೆ ಅಧಿಕಾರಿಗಳೇ ಹೊಣೆ: ಹುರುಡಿ ವಿಕ್ರಂ

ಹಾಸನ: ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವಿಗೆ ಅರಣ್ಯಇಲಾಖೆ ಅಧಿಕಾರಿಗಳೇ ನೇರ ಕಾರಣರಾಗಿದ್ದು, ಇದಕ್ಕೆ ಕಾರಣರಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಕಾಡಾನೆ-ಸಾಕಾನೆ ಸಂರಕ್ಷಣಾ ಸಂಘದ ಅಧ್ಯಕ್ಷ ಹಾಗೂ ಪರಿಸರವಾದಿ ಹುರುಡಿ ವಿಕ್ರಂ ಆಗ್ರಹಿಸಿದರು.

ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಘಟನೆ ನಡೆದ ದಿನ ಕಾಡಿನಲ್ಲಿ ಎಷ್ಟು ಕಾಡಾನೆ ಇದ್ದವು, ಅವುಗಳಲ್ಲಿ ಎಷ್ಟು ಮದ ಬಂದ ಹಾಗೂ ಹೆಣ್ಣು ಮತ್ತು ಗಂಡಾನೆಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಕಾಡಾನೆ ಸೆರೆಗೆ ಬಳಸುವ ಮೂರು ಬಗೆಯ ಔಷಧಿಗಳ ಪೈಕಿ ವೈದ್ಯರ ನಿರ್ಲಕ್ಷದಿಂದ ಡಾಟ್ ವೇಳೆ ಸೂಕ್ತ ಔಷಧಿ ಬಳಸಿಲ್ಲ, ಅಲ್ಲದೆ ವೈದ್ಯರೂ ಕೂಡ ಅವಸರದಿಂದ ಕೆಲಸ ಮಾಡಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ಆರೋಪಿಸಿದರು.
ಗಲಿಬಿಲಿಯಲ್ಲಿ ಕಾಡಾನೆಗೆ ಹಾರಿಸ ಬೇಕಿದ್ದ ಗುಂಡು ಅರ್ಜುನನ ಬಲಗಾಲಿಗೆ ತಗುಲಿತು ಎಂದು ಸ್ವತಃ ಮಾವುತ ವಿನು ಹೇಳಿದ್ದಾನೆ. ಇದೆಲ್ಲವನ್ನು ನೋಡಿದರೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದರು.
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 65 ವರ್ಷ ಮೇಲ್ಪಟ್ಟ ಆನೆಗಳನ್ನು ಕಾರ್ಯಾಚರಣೆಗೆ ಬಳಸ ಬಾರದು ಎಂಬ ನಿಯಮ ಇದೆ. ಆದರೂ ನಿಯಮ ಮೀರಿ ಆರ್ಜುನನನ್ನು ಕಾರ್ಯಾಚರಣೆಗೆ ಬಳಸಿದ್ದೇ ತಪ್ಪು, ಇದೇ ಅರ್ಜುನ ದುರಂತ ಸಾವಿಗೀಡಾಗಲು ಕಾರಣ ಎಂದು ಬೇಸರ ಹೊರ ಹಾಕಿದರು.
ಹಿಂದೆ ಕೂಡ ಒಂದು ಕಾಂತಿ ಎಂಬ ಹೆಣ್ಣು ಆನೆಗೆ ಕಾನೂನು ಬಾಹಿರವಾಗಿ ನಾಲ್ಕೈದು ಡಾಟ್ ಹೊಡೆದು ಕೊಂದಿದ್ದಾರೆ, ಜೊತೆಗೆ ಅದರ ಮರಿಯೂ ಮೃತಪಟ್ಟಿದೆ. ಈ ಎಲ್ಲಾ ಪ್ರಕರಣಗಳ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ವೆಂಕಟೇಶ್ ಎಂಬ ಶಾರ್ಪ್ ಶೂಟರ್ ಕೂಡ ಭೀಮ ಆನೆ ದಾಳಿಗೆ ಬಲಿಯಾಗಿದ್ದು ಎಲ್ಲರಿಗೂ ಗೊತ್ತಿದೆ, ಇದಕ್ಕೂ ಅರಣ್ಯ ಇಲಾಖೆ ನಿರ್ಲಕ್ಷ÷್ಯವೇ ಕಾರಣ. ಕಾಡಾನೆ ಕಾರ್ಯಾಚರಣೆಯಲ್ಲಿ ಭಾಗಿ ಆಗುವ ವೈದ್ಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ತರಬೇತಿ ಅಗತ್ಯ ಇದೆ, ಕೂಡಲೇ ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಾಲಿ ಸಾಮಾಜಿಕ ಜಾಲತಾಣಗಳಲ್ಲಿ ಅರ್ಜುನನ ಕೊಂದ ಆನೆ ಬಗ್ಗೆ ಫೋಟೋ ವೈರಲ್ ಆಗಿರುವ ಫೋಟೋ ಸುಳ್ಳು. ಅರ್ಜುನನ ಮೇಲೆ ದಾಳಿ ಮಾಡಿದ ಆನೆಯೇ ಬೇರೆ, ವೈರಲ್ ಆಗಿರುವ ಫೋಟೋ ದಲ್ಲಿನ ಆನೆಯೇ ಬೇರೆ ಎಂದು ಇದೇ ವೇಳೆ ಹೇಳಿದರು.