ಕೌರವರ ಜತೆ ಸೇರಿಕೊಂಡರೆ ನಾಶವಾಗಿ ಹೋಗ್ತಾರೆ; ಪ್ರೀತಂಗೌಡ ವಿರುದ್ಧ ಸಿ.ಟಿ.ರವಿ ಪರೋಕ್ಷ ಅಸಮಾಧಾನ

ಕೆಲವರು ನಾನು ಯುದ್ಧ ಮಾಡಲ್ಲ‌ ತಟಸ್ಥ ಅಂತ ಹೇಳಬಹುದು,ಅವರು ನಿಂತುಕೊಂಡು ನೋಡುವವರು ಆಗ್ತಾರೆ.

ಹಾಸನ; ಪಕ್ಷದ ನಿಲುವಿಗ ತಕ್ಕಂತೆ ಎನ್.ಡಿ.ಎ. ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ಧುಮಕದೇ ಬೆಂಬಲಿಗರೂ ಪ್ರಚಾರದಿಂದ ಅಂತರ ಕಾಯ್ದುಕೊಳ್ಳಲು ಕಾರಣವಾಗಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ವಿರುದ್ಧ ಮಾಜಿ ಸಚಿವ ಸಿ.ಟಿ. ರವಿ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ಬಳಿಕ ಮಾತನಾಡಿದ ಅವರು, ನಾನು ಫೋನ್‌ನಲ್ಲಿ ಪ್ರೀತಂಗೌಡ ಜೊತೆ ಮಾತನಾಡಿದೆ. ಅವರು ಕೆಲಸ ಮಾಡ್ತಾರೆ, ಉಳಿದವರೂ ಮಾಡ್ತಾರೆ. ಯಾವುದೇ ಅಪಸ್ವರ ಇಲ್ಲದೆ ಇರುವ ರೀತಿಯಲ್ಲಿ ಎಲ್ಲರನ್ನೂ ಜೋಡಿಸಿಕೊಂಡು ಕೆಲಸ ಮಾಡ್ತಿವಿ ಎಂದರು.

ಹಿಂದೆ ನಾನು ಖಾರವಾಗಿ ಮಾತನಾಡುತ್ತಿದ್ದೆ. ಈಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗೆಲ್ಲಿಸಲು ಬಂದಿಲ್ವಾ? ಇವತ್ತು ನಾನು ಬಂದಿದ್ದೀನಿ, ನಾಳೆ ಪ್ರೀತಂಗೌಡ ಬರ್ತಾರೆ. ಪ್ರೀತಂಗೌಡ ಬರಲೇಬೇಕು ದೇಶಕ್ಕಿಂತ ದೊಡ್ಡ ಸಂಗತಿ ಇನ್ನೊಂದು ಯಾವುದು ಇಲ್ಲ, ಪಕ್ಷಕ್ಕಿಂತ ದೊಡ್ಡ ಸಂಗತಿ ಇನ್ನೊಂದು ಯಾವುದೂ ಇಲ್ಲ ಎಂದರು.

ಇದೊಂದು ಕುರುಕ್ಷೇತ್ರ ಯುದ್ಧ, ಪಾಂಡವರ ನೇತೃತ್ವವನ್ನು ನರೇಂದ್ರಮೋದಿ ಅವರು ವಹಿಸಿದ್ದಾರೆ. ಕೌರವರ ನೇತೃತ್ವವನ್ನು INDIA ಅಲಾಯನ್ಸ್ ವಹಿಸಿದೆ. ಪಾಂಡವರ ಜೊತೆ ಯಾ‌‌ರ‌್ಯಾರು ಯುದ್ಧ ಮಾಡಬೇಕು ಅಂತ ಬಯಸುತ್ತಾರೆ, ಅವರು ಪಾಂಡವರ ಜೊತೆ ಸೇರಿಕೊಳ್ತಾರೆ. ಕೆಲವರು ಕೌರವರ ಜೊತೆ ಸೇರಿ ಯುದ್ಧ ಮಾಡಬೇಕು ಅಂತ ಬಯಸಿರ್ತಾರೆ. ಆದರೆ ಅಂತಿಮವಾಗಿ ಕುರುಕ್ಷೇತ್ರ ಯುದ್ಧದಲ್ಲಿ ಗೆದ್ದಿದ್ದು ಪಾಂಡವರು.

ಧರ್ಮ ಎಲ್ಲೆಡೆ ಇರುತ್ತೆ, ದೇಶದ ಪರವಾಗಿ ಯಾರು ನಿಂತುಕೊಳ್ತಾರೆ ಅವರೇ ಗಡಲ್ಲಬೇಕಿರುವುದು. ಹಾಗಾಗಿ ದೇಶ ಗೆಲ್ಲಬೇಕು ಎನ್ನುವವರು ಎನ್‌ಡಿಎ ಅಲಾಯನ್ಸ್ ಜೊತೆ ಬರ್ತಾರೆ, ಓಟು ಕೊಡ್ತಾರೆ. ದೇಶ ಹಾಳಾದರೂ ಪರ್ವಾಗಿಲ್ಲ‌ ಅನ್ನೋರು ಇರ್ತಾರೆ. ಹಾಗಾಗಿ ಯಾರಾದರೂ ಕೌರವರ ಜೊತೆ ಸೇರಿಕೊಂಡರೆ ಅವರು ನಾಶವಾಗಿ ಹೋಗ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

ಕೌರವರಂತೂ ನಾಶವಾಗಲೇಬೇಕು ಆಗೇ ಆಗ್ತಾರೆ.ಕೆಲವರು ನಾನು ಯುದ್ಧ ಮಾಡಲ್ಲ‌ ತಟಸ್ಥ ಅಂತ ಹೇಳಬಹುದು,ಅವರು ನಿಂತುಕೊಂಡು ನೋಡುವವರು ಆಗ್ತಾರೆ. ನಾವು ಪ್ರತಿ ಕಾರ್ಯಕರ್ತರನ್ನು ಜೋಡಿಸುವ ಕೆಲಸ ಮಾಡ್ತಿವಿ ಎಂದರು.