ಅರ್ಜುನನಿಲ್ಲದ ಪಯಣ; ೩ ವಾರ ಕಾರ್ಯಾಚರಣೆಗೆ ಸ್ಥಗಿತ: ಶಿಬಿರಕ್ಕೆ ಮರಳಿದ ೫ ಸಾಕಾನೆ

ಹಾಸನ: ಅಂಬಾರಿ ಆನೆ, ಕ್ಯಾಪ್ಟನ್ ಅರ್ಜುನ ವೀರ ಮರಣ ಹಿನ್ನೆಲೆ, ಜಿಲ್ಲೆಯ ಮಲೆನಾಡು ಭಾಗದಲ್ಲಿ ನಡೆಯುತ್ತಿದ್ದ ಪುಂಡಾನೆ ಸೆರೆ, ಸ್ಥಳಾಂತರ ಹಾಗೂ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಬೇಲೂರು ತಾಲೂಕು ಬಿಕ್ಕೋಡು ಗ್ರಾಮದಲ್ಲಿ ಮಾತನಾಡಿದ ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ರವಿಶಂಕರ್, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಾಕಾನೆಗಳನ್ನು ವಾಪಸ್ ಕಳುಹಿಸುತ್ತಿದ್ದೇವೆ ಎಂದರು.
ಹತ್ತು ದಿನ ಬಿಟ್ಟು ಮತ್ತೆ ಕಾರ್ಯಾಚರಣೆ ಆರಂಭಿಸಲು ತೀರ್ಮಾನ ಮಾಡಿದ್ದೇವೆ.

ಅರ್ಜುನ ಮರಣ ನಂತರ ಮಾವುತರು, ಕಾವಾಡಿಗಳು ಹಾಗೂ ನಮ್ಮ ಸಿಬ್ಬಂದಿ ದು:ಖದಲ್ಲಿದ್ದಾರೆ. ಅವರೆಲ್ಲರೂ ಸುಧಾರಿಸಿಕೊಳ್ಳಲಿ. ಸ್ವಲ್ಪ ದಿನ ಸುಧಾರಿಸಿಕೊಂಡ ನಂತರ ಕಾರ್ಯಾಚರಣೆ ಶುರು ಮಾಡುತ್ತೇವೆ ಎಂದರು.

ಒಟ್ಟು ೯ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಬೇಕಿತ್ತು. ಈಗಾಗಲೇ ಮೂರು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಹಾಕಲಾಗಿದೆ. ೩ ಪುಂಡಾನೆಗಳನ್ನು ಸ್ಥಳಾಂತರ ಮಾಡಲಾಗಿದೆ. ಉಳಿದ ಕಾರ್ಯಾಚರಣೆಯನ್ನು ಖಂಡಿತಾ ಪೂರ್ಣಗೊಳಿಸುತ್ತೇವೆ ಎಂದರು.

ಜನರ ಮುಂದೆಯೇ ನಡೆದಿದೆ:
ಮರಣೋತ್ತರ ಪರೀಕ್ಷೆ ನಡೆಸದೆ ಅರ್ಜುನನ ಅಂತ್ಯಕ್ರಿಯೆ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಹಾಸನ ಪಶುವೈದ್ಯಕೀಯ ಕಾಲೇಜಿನ ಡಾ.ಗಿರೀಶ್, ಮತ್ತವರ ತಂಡ ಬಂದು ಮರಣೋತ್ತರ ಪರೀಕ್ಷೆಯನ್ನು ಮುಚ್ಚು ಮರೆ ಇಲ್ಲದೆ ಎಲ್ಲರೆದುರೇ ಮಾಡಿದೆ. ಅರ್ಜುನನ ಕಾಲಿಗೆ ಗುಂಡು ತಗುಲಿದ ವಿಚಾರ ಹೌದಾದರೆ ಮುಂದೆ ತನಿಖೆ ಮಾಡುತ್ತೇವೆ ಎಂದರು. ಆ ತರ ಏನೂ ಆಗಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗುತ್ತೆ. ನಾಲ್ಕೂ ಕಾಲು ಹೊರಗಡೆ ಕಾಣುತ್ತಿತ್ತು. ವೈದ್ಯರು ಎಲ್ಲಾ ಚೆಕ್ ಮಾಡಿಯೇ ಪಿಎಂ ಮಾಡಿದ್ದಾರೆ ಎಂದರು.

ಪ್ರಶಾಂತ ಆನೆಗೆ ಅರವಳಿಕೆ ಚುಚ್ಚುಮದ್ದು ಹೊಡೆದ ವಿಚಾರವಾಗಿ, ನೀವು, ಜನರು ಏನು ಹೇಳುತ್ತಿದ್ದಾರೆ ಅದರ ಬಗ್ಗೆ ತನಿಖೆ ಮಾಡಿಸುತ್ತೇವೆ. ಆಗಿದೆಯೋ, ಆಗಿಲ್ಲವೋ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ನಂತರ ನಿಮಗೆ ಮಾಹಿತಿ ಕೊಡುತ್ತೇನೆ ಎಂದು ತಿಳಿಸಿದರು.

ಮೂರು ವಾರ ಸ್ಥಗಿತ: ಅರ್ಜುನ ಸಾವು ಹಿನ್ನೆಲೆ, ಜಿಲ್ಲೆಯಲ್ಲಿ ಮೂರು ವಾರಗಳ ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಕಳೆದ ನ.೨೪ರಿಂದ ಆಪರೇಷನ್ ಶುರುವಾಗಿತ್ತು. ಆದರೆ ಕ್ಯಾಪ್ಟನ್ ಅರ್ಜುನ ವೀರ ಮರಣ ಹಿನ್ನೆಲೆ, ಉಳೀದ ಆನೆಗಳು ವಾಪಸ್ ಶಿಬಿರಕ್ಕೆ ತೆರಳಿದವು. ಸಾಕಾನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಲಾಯಿತು. ಬೇಸರದಿಂದಲೇ ಅಧಿಕಾರಿಗಳು ಬೀಳ್ಕೊಡುಗೆ ನೀಡಿದರು. ಬರುವಾಗ ಆರು ಸಾಕಾನೆ ಜೊತೆ ಹಲವರು, ಹೋಗುವಾಗ ಅಷ್ಟೇ ಮಂದಿ, ಆನೆ ಮಾತ್ರ ಐದು ಎಂಬ ನೋವಿನಲ್ಲೇ ಮಾವುತರು, ಕಾವಾಡಿಗರು ಹೊರಟರು.
ಕಾರ್ಯಾಚರಣೆಗೆ ಬರುವಾಗ ಅರ್ಜುನ, ಧನಂಜಯ, ಪ್ರಶಾಂತ, ಕರ್ನಾಟಕದ ಭೀಮ, ಅಶ್ವತ್ಥಾಮ, ಸುಗ್ರೀವ ಇದ್ದರು. ಹೋಗುವಾಗ ಅರ್ಜುನ ಮಾತ್ರ ಇರಲಿಲ್ಲ.
ಸಿಸಿಎಫ್ ರವಿಶಂಕರ್, ಡಿಸಿಎಫ್ ಮೋಹನ್ ಕುಮಾರ್, ಎಸಿಎಫ್ ಮಹದೇವ್ ಮೊದಲಾದವರು ಆನೆಗಳನ್ನೂ ಭಾರವಾದ ಹೃದಯದಿಂದಲೇ ಬೀಳ್ಕೊಟ್ಟರು.

ಕಣ್ಣೀರು…ಮೌನ…ಕನವರಿಕೆ:
ಬಿಕ್ಕೋಡು ಬಳಿಯ ಕ್ಯಾಂಪ್‌ನಲ್ಲಿ ಅರ್ಜುನನಿಲ್ಲದೆ ನೀರವ ಮೌನ ಆವರಿಸಿತ್ತು.
ಮಾವುತರು ಇನ್ನೂ ದು:ಖದಲ್ಲೇ ಇದ್ದರು. ಕುಟುಂಬ ಸದಸ್ಯನ ಕಳೆದುಕೊಂಡು ಅನಾಥರಾದಂತೆ ಅತ್ತರು, ಎಲ್ಲರೂ ಶೋಕದಿಂದ ಹೊರ ಬಾರದೆ ರೋದಿಸಿದರು.
ಕ್ಯಾಪ್ಟನ್ ಜೊತೆ ಬಂದಿದ್ದೆವು, ಇದೀಗ ಅವನಿಲ್ಲದೆ ಹೋಗುವುದು ನೋವು ತರಿಸಿದೆ ಎಂದು ಕಣ್ಣೀರು ಹೊರ ಹಾಕಿದರು.