ಹಾಸನದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ; ವಿಲೇವಾರಿ ಘಟಕಕ್ಕೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ಎಸ್ಪಿ ನಂದಿನಿ-ತೀವ್ರ ಅಸಮಾಧಾನ

ಹಾಸನ: ನಗರದ ಹಲವೆಡೆ ವಿಲೇವಾರಿಯಾಗದ ತ್ಯಾಜ್ಯದ ರಾಶಿ ಎಲ್ಲೆಂದರಲ್ಲಿ ಬಿದ್ದಿರುವ ಬಗೆಗಿನ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ನಂದಿನಿ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತ್ಯಾಜ್ಯ ವಿಲೇವಾರಿಯಲ್ಲಿ ವಿಫಲವಾಗಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

 ನಗರದಲ್ಲಿ ಕಸ ವಿಲೇವಾರಿ ಆಗದಿರುವ ಪ್ರದೇಶಗಳಿಗೆ ಎಸ್ಪಿ ನಂದಿನಿ ಭೇಟಿ ನೀಡಿ ಸ್ಥಿತಿಗತಿಯನ್ನು ಪರಿಶೀಲಿಸಿದರು. ಈ ವೇಳೆ ನಗರಸಭೆ ಆಯುಕ್ತ ಕೆ.ಎಂ. ರಮೇಶ್ ಮತ್ತು ಆರೋಗ್ಯ ನಿರೀಕ್ಷಕರು ಉಪಸ್ಥಿತರಿದ್ದರು. ಅಲ್ಲದೆ, ಅಗಿಲೆ ಬಳಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೂ ಸಿಬ್ಬಂದಿಗಳ ಜತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್ಪಿ, ಅಲ್ಲಿ ಕಂಡುಬಂದ ಲೋಪದೋಷಗಳ ಬಗ್ಗೆ ಅಸಮಾಧಾನ ಹೊರಹಾಕಿದರು.

ವಿಲೇವಾರಿಯಾಗದ ತ್ಯಾಜ್ಯದ ಗುಡ್ಡೆ

“ಸರಿಯಾಗಿ ತ್ಯಾಜ್ಯ ವಿಲೇವಾರಿ ಏಕೆ ಮಾಡಿಲ್ಲ? ನಗರದಲ್ಲಿ ಕಸದ ರಾಶಿ ಯಾಕೆ ತುಂಬಿಕೊಂಡಿದೆ?” ಎಂದು ಲೋಕಾಯುಕ್ತ ಎಸ್ಪಿ ನಂದಿನಿ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು. ತ್ಯಾಜ್ಯ ನಿರ್ವಹಣೆಯಲ್ಲಿ ನಗರಸಭೆಯ ಸಮರ್ಪಕ ಕ್ರಮಗಳ ಕೊರತೆಯೇ ಈ ಸಮಸ್ಯೆಗೆ ಕಾರಣ ಎಂದರು.

ತ್ಯಾಜ್ಯ ವಿಲೇವಾರಿ ಕಾರ್ಯವನ್ನು ತ್ವರಿತಗೊಳಿಸುವಂತೆ ಎಸ್ಪಿ ಸೂಚನೆ ನೀಡಿದರು.