ಹಾಡು ನಿಲ್ಲಿಸಿದ ಜನಪದ ಕೋಗಿಲೆ: ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಇನ್ನಿಲ್ಲ

ಕಾರವಾರ: ಸುಕ್ರಜ್ಜಿ ಎಂದೇ ಪ್ರಸಿದ್ದರಾಗಿದ್ದ ಜನಪದ ಕೋಗಿಲೆ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ವಯೋ ಸಹಜ ಕಾಯಿಲೆಯಿಂದ ಗುರುವಾರ ನಸುಕಿನ‌ ಜಾವ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಕೆಲ ದಿನಗಳ ಹಿಂದೆ ಉಸಿರಾಟ ಸಮಸ್ಯೆಯಿಂದಾಗಿ ಉಡುಪಿಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು. ಆದರೆ ಇಂದು ಮುಂಜಾನೆ 4 ಗಂಟೆ ಸಮಯಕ್ಕೆ ಅಂಕೋಲದ ಬಡಿಗೇರಿಯ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಸುಕ್ರಿ ಬೊಮ್ಮಗೌಡ ಅವರು ಇಬ್ಬರು ಮೊಮ್ಮಕ್ಕಳು ಹಾಗೂ ಸೊಸೆಯನ್ನು ಅಗಲಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಹಾಲಕ್ಕಿ ಒಕ್ಕಲಿಗ ಜನಾಂಗಕ್ಕೆ ಸೇರಿದ ಸುಕ್ರಿ ಬೊಮ್ಮಗೌಡ ಅವರಿಗೆ ಸುಮಾರು 5 ಸಾವಿರ ಹಾಲಕ್ಕಿ ಹಾಡುಗಳು ಕಂಠಪಾಟ ಆಗಿದ್ದವು. ಜನಪದ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಸುಕ್ರಜ್ಜಿ ನೀಡಿರುವ ಕೊಡುಗೆ ಗುರುತಿಸಿ, 1999ರಲ್ಲಿ ಜನಪದಶ್ರೀ ಪ್ರಶಸ್ತಿ, 2006ರಲ್ಲಿ ನಾಡೋಜ ಪ್ರಶಸ್ತಿ, 2017ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ದೇಶ ಹಾಗೂ ರಾಜ್ಯದ ಹಲವು ಪ್ರತಿಷ್ಠಿತ ಪ್ರಶಸ್ತಿ ಸುಕ್ರಿ ಬೊಮ್ಮ ಗೌಡ ಅವರನ್ನು ಅರಸಿಕೊಂಡು ಬಂದಿವೆ.