ಹಾಸನ: ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ಭೇಟಿ ನೀಡುವ ಗ್ರಾಮದಲ್ಲಿ ಸಿದ್ಧಪಡಿಸಿದ್ದ ಬಾಡೂಟವನ್ನು ಚುನಾವಣಾ ಆಯೋಗದ ಫ್ಲೈಯಿಂಗ್ ಸ್ವ್ಯಾಡ್ ತಂಡ ದಾಳಿ ನಡೆಸಿ ಆಹಾರ ವಶಕ್ಕೆ ಪಡೆದು ನಾಶಪಡಿಸಿದ್ದು, ವ್ಯಕ್ತಿಯೊಬ್ಬರ ಹುಟ್ಟುಹಬ್ಬಕ್ಕೆಂದು ತಯಾರಿಸಿದ್ದ ಖಾದ್ಯಗಳನ್ನು ಎಚ್.ಡಿ.ರೇವಣ್ಣ ಅವರ ಕುಮ್ಮಕ್ಕಿನಿಂದ ನಾಶ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೊಳೆನರಸೀಪುರ ತಾಲ್ಲೂಕಿನ, ಕೋಡಿಹಳ್ಳಿ ಗ್ರಾಮಕ್ಕೆ ಚುನಾವಣೆ ಪ್ರಚಾರಕ್ಕೆ ಆಗಮಿಸುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ಪಟೇಲ್ ಸಭೆಗೆ ಆಗಮಿಸುವವರಿಗೆ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು ಎನ್ನುವ ದೂರು ಬಂದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಎಫ್‌ಎಸ್‌ಟಿ ತಂಡ ಪರಿಶೀಲಿಸಿದಾಗ ಬಾಡೂಟ ವ್ಯವಸ್ಥೆ ಮಾಡಿರುವುದು ಬೆಳಕಿಗೆ ಬಂದಿದೆ.
ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಆಹಾರವನ್ನು ವಶಕ್ಕೆ ಪಡೆದ ಎಫ್‌ಎಸ್‌ಟಿ ತಂಡ ನಂತರ ರಸ್ತೆಗೆ ಬದಿಗೆ ಸುರಿದು ನಾಶ ಮಾಡಿರುವುದಾಗಿ ಪೊಲೀಸ್ ಠಾಣೆಗೆ ತೆರಳಿ ಫ್ಲೈಯಿಂಗ್ ಸ್ವ್ಯಾಡ್ ತಂಡ ವರದಿ ನೀಡಿದೆ.
ಅದನ್ನು ಆಧರಿಸಿ ಗ್ರಾಮದ ಓರ್ವನ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಡೂಟ ನೆಲಕ್ಕೆ ಚೆಲ್ಲಿರುವ ವಿಡಿಯೋ ರೆಕಾರ್ಡ್ ಮಾಡಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಪೊಲೀಸರ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ರಸ್ತೆಗೆ ಚೆಲ್ಲಿರುವ ಬಿರಿಯಾನಿಯನ್ನೇ ಕೆಲವರು ಸೇವಿಸಿದ್ದೂ ವಿಡಿಯೋದಲ್ಲಿ ದಾಖಲಾಗಿದೆ.