ಶಾಲಾ ವಾಹನಗಳ ಎಫ್.ಸಿ. ಮತ್ತು ಇನ್ಸೂರೆನ್ಸ್ ನವೀಕರಣ ಮಾಡದಿದ್ದರೆ ದಂಡ: ಆರ್.ಟಿ.ಒ. ಮಲ್ಲೇಶ್ ಎಚ್ಚರಿಕೆ

ವಾಹನ ತಪಾಸಣೆ ವೇಳೆ ಲೋಪ ಕಂಡು ಬಂದರೆ ಬಸ್ ವಶಕ್ಕೆ| ನಿಯಮ ಪಾಲಿಸಲು ಶಾಲೆ ಮಾಲೀಕರು, ಡಿಡಿಪಿಐಗೆ ಪತ್ರ

ಹಾಸನ: ಎರಡು ತಿಂಗಳಿಂದ ಶಾಲೆಗಳಿಗೆ ಬೇಸಿಗೆ ರಜೆಯಿದ್ದ ಕಾರಣ ಕೆಲ ಶಾಲಾ ಬಸ್ಸುಗಳ ಫಿಟ್ನೆಸ್ ಸರ್ಟಿಫಿಕೇಟ್ ಮತ್ತು ಇನ್ಸೂರೆನ್ಸ್ ಅವಧಿ ಮುಗಿದಿದ್ದು ತಕ್ಷಣವೇ ದಾಖಲೆಗಳನ್ನು ನವೀಕರಿಸಿಕೊಳ್ಳಬೇಕು ಇಲ್ಲವಾದರೆ ಅಂತಹ ವಾಹನಗಳು ರಸ್ತೆಗಿಳಿದರೆ ದಂಡ ವಿಧಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲೇಶ್ ಎಚ್ಚರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಜೂನ್ 1 ರಿಂದ ಎಲ್ಲೆಡೆ ಶಾಲಾ ತರಗತಿಗಳು ಆರಂಭವಾಗುವ ಹಿನ್ನೆಲೆಯಲ್ಲಿ ಮಕ್ಕಳಿಗೆ ತೊಂದರೆ ಆಗದಂತೆ ಶಾಲಾ ಮಾಲೀಕರು ಎಚ್ಚರ ವಹಿಸಬೇಕು. ಜಿಲ್ಲೆಯಲ್ಲಿ ಒಟ್ಟು 877 ಶಾಲಾ ವಾಹನಗಳಿದ್ದು ಅವುಗಳ ದಾಖಲಾತಿ ಅಪ್ ಡೇಟ್ ಗೆ ಶಾಲಾ ಮಾಲೀಕರು, ಬಿಇಒ ಮತ್ತು ಡಿಡಿಪಿಐ ಅವರಿಗೆ ಪತ್ರದ ಬರೆಯಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಶಾಲಾ ವಾಹನಗಳ ದಾಖಲೆ ತಪಾಸಣೆ ಕೈಗೊಳ್ಳುವುದರಿಂದ ಆ ಸಮಯದಲ್ಲಿ ಯಾವುದಾದರೂ ವಾಹನಗಳ ದಾಖಲಾತಿಗಳು ಸರಿ ಇಲ್ಲದಿದ್ದಲ್ಲಿ ತಕ್ಷಣವೇ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ ಎಂದು ಎಚ್ಚರಿಸಿದರು.

ಶಾಲಾ ವಾಹನಗಳ‌ನ್ನು ಅತಿ ವೇಗವಾಗಿ ಚಲಾಯಿಸುವುದು ಮತ್ತು ನಿಗದಿತ ಆಸನಗಳಿಗಿಂತಲೂ ಹೆಚ್ಚಿನ ಮಕ್ಕಳನ್ನು ಸಾಗಿಸುವುದು ಕಂಡು ಬಂದರೆ ದಂಡ ವಿಧಿಸಲಾಗುವುದು ಎಂದರು. ಅಧೀಕ್ಷಕ ಕುಮಾರ್ ಇದ್ದರು.