ಹಾಸನ: ಶಿಫಾರಸ್ಸು ಹಾಗೂ ರಾಜಕಾರಣಿಗಳ ಪರಿಚಯವನ್ನು ಹೇಳಿಕೊಂಡು ಸರ್ಕಾರಿ ಕಚೇರಿಗೆ ಬರುವ ಜನರ ಕೆಲಸ- ಕಾರ್ಯಗಳು ಒಂದು ವಾರ ತಡವಾದರೂ ಪರವಾಗಿಲ್ಲ, ಯಾವುದೇ ಶಿಫಾರಸ್ಸು ಇಲ್ಲದೆ ಕಚೇರಿಗೆ ಬರುವ ಸಾಮಾನ್ಯ ಜನರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಸೂಚಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಕ್ಷಮತೆಯ ಬಗ್ಗೆ ಅನೇಕ ದೂರುಗಳು ಕೇಳಿ ಬರುತ್ತಿದ್ದು, ಪಿಡಿಓಗಳು ಜನಸ್ನೇಹಿಯಾಗಿ ವರ್ತಿಸಬೇಕು. ಗ್ರಾಮೀಣ ಜನರನ್ನು ಕಚೇರಿಗೆ ಅಲೆದಾಡಿಸದೆ, ಭ್ರಷ್ಟಾಚಾರ ರಹಿತವಾಗಿ ಕೆಲಸಗಳನ್ನು ಕಾನೂನಿನ್ವಯ ಸಮರ್ಪಕವಾಗಿ ಮಾಡಿಕೊಡಬೇಕೆಂದು ಎಂದರು.
ಅಧಿಕಾರಿಗಳ ವಿರುದ್ಧ ಆರೋಪ ಕೇಳಿ ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಅವರ ಇಲಾಖೆಯ ಪ್ರಗತಿಗಳು ಹಾಗೂ ಕುಂದುಕೊರತೆಗಳು ಬಗ್ಗೆ ಮಾಹಿತಿ ಪಡೆದುಕೊಂಡ ಸಂಸದರು ಸರ್ಕಾರದಿಂದ ನೀಡಲಾಗುವ ಸಬ್ಸಿಡಿ, ಸಹಾಯಧನ ಹಾಗೂ ವಿವಿಧ ಯೋಜನೆಗಳು ಸಮರ್ಪಕವಾಗಿ ಅರ್ಹರಿಗೆ ತಲುಪುವಂತೆ ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ಯಾವುದೇ ಲೋಪವೆಸಗದಂತೆ ಕರ್ತವ್ಯ ನಿರ್ವಹಿಸಬೇಕೆಂದರು.
ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತನಾಡುವಾಗ, “ಸರ್ಕಾರದಿಂದ ಬಂದ ಅನುದಾನವನ್ನು ಖಾಲಿ ಮಾಡುವ ಸಲುವಾಗಿ ಗಿಡ ಹಾಕುವುದು ಮುಖ್ಯವಲ್ಲ, ಅದು ಬೆಳೆಯುವಂತೆ ಪೋಷಿಸಬೇಕು. ಅರಣ್ಯ ಇಲಾಖೆಯ ಗಾರ್ಡ್ಗಳು ಗಾಡಿ ಹಾಕಿಕೊಂಡು ಸುತ್ತಾಡುವುದರ ಬದಲು ನೆಟ್ಟ ಗಿಡಗಳ ಪಾಲನೆ ಪೋಷಣೆ ಬಗ್ಗೆ ಗಮನಹರಿಸಬೇಕೆಂದರು.
ಅಂಗವಿಕಲರಿಗೆ ನೀಡಲಾಗುವ ವಾಹನಗಳು ಹಾಗೂ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಿಸಲು ಸೂಚಿಸಿದ ಸಂಸದರು, ಹಿಂದುಳಿದ ವರ್ಗಗಳ ಹಾಸ್ಟೆಲ್ ದುರಸ್ತಿ ಮತ್ತು ಅದಕ್ಕೆ ಬೇಕಾಗುವ ಅನುದಾನದ ಕುರಿತು ಮಾಹಿತಿ ಪಡೆದರು.
ಕಂದಾಯ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಗ್ರಾಮ ಲೆಕ್ಕಿಗರು ಇನ್ನಷ್ಟು ಚುರುಕಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕೆಂದು ತಹಶೀಲ್ದಾರ್ ಶ್ವೇತಾ ಅವರಿಗೆ ಸೂಚಿಸಿದರು. ಯಾವುದೇ ಕಾರಣಕ್ಕೂ ಖಾತೆ ಬದಲಾವಣೆ ಸಂಬಂಧ ಪಟ್ಟಂತೆ ಜನರನ್ನು ಸತಾಯಿಸಬೇಡಿ. ದುರಸ್ತು ಅಭಿಯಾನ, ಪಹಣಿ ಆಧಾರ್ ಜೋಡಣೆ, 1 ಟು 5 , ಕುರಿತ ಪ್ರಗತಿ ಮಾಹಿತಿಯನ್ನು ಪಡೆದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಸನ ತಹಶೀಲ್ದಾರ್ ಶ್ವೇತಾ ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.