ಹಾಸನ: ಹಾಸನಾಂಬೆ ಸಾರ್ವಜನಿಕ ದರ್ಶನದ ಮೊದಲ ದಿನವಾದ ಇಂದು
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಅವರ ಕುಟುಂಬ, ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಕೆ.ಗೋಪಾಲಯ್ಯ ಸೇರಿದಂತೆ ಹಲವು ಗಣ್ಯರು ಹಾಗೂ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.
ಬೆಳಗ್ಗೆ ೬ ಗಂಟೆಯಿಂದಲೇ ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ, ಸರತಿ ಸಾಲಲ್ಲಿ ನಿಂತು ತಾಯಿಯ ದರ್ಶನ ಪಡೆದು ಪುನೀತರಾದರು.
ದೇವೇಗೌಡರು, ಪತ್ನಿ ಚೆನ್ನಮ್ಮ, ತಮ್ಮ ಇಬ್ಬರು ಪುತ್ರಿಯರೊಂದಿಗೆ ಆಗಮಿಸಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಗೌಡರು, ಜಗನ್ಮಾತೆ ಹಾಸನಾಂಬೆ ತಾಯಿ ದರ್ಶನಕ್ಕೆ ಕುಟುಂಬ ಸಮೇತ ಬಂದಿದ್ದೇವೆ. ಬಾಗಿಲು ಮುಚ್ಚುವಾಗ ಇಡುವ ನೈವೇದ್ಯ ಕೆಡುವುದಿಲ್ಲ, ಹೂ ಬಾಡುವುದಿಲ್ಲ, ದೀಪ ಆರಿರುವುದಿಲ್ಲ ಎಂಬಿತ್ಯಾದಿ ನಂಬಿಕೆ ಇದೆ. ಉತ್ತರದಲ್ಲಿ ವೈಷ್ಣವಿ ಸ್ವರೂಪದಂತೆ ಇಲ್ಲಿ ಹಾಸನಾಂಬೆ ಇದ್ದಾಳೆ. ಮುಂದಿನ ಸಾರಿ ಆರೋಗ್ಯವಾಗಿ ಮೆಟ್ಟುಲು ಹತ್ತಿ ಬರುವ ಶಕ್ತಿಕೊಡು ತಾಯಿ ಎಂದು ದೇವಿಯಲ್ಲಿ ಬೇಡಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಕುಟುಂಬದ ಎಲ್ಲರೂ ಬಂದು ದೇವಿಯ ದರ್ಶನ ಪಡೆಯಲಿದ್ದಾರೆ ಎಂದು ಹೇಳಿದರು.
ಜಿಲ್ಲಾಡಳಿತಕ್ಕೆ ಬಹುಪರಾಕ್:
ಇದೇ ವೇಳೆ ಹಾಸನಾಂಬೆ ಉತ್ಸವದಲ್ಲಿ ಎಲ್ಲಾ ವ್ಯವಸ್ಥೆ ಅಚ್ಚುಕಟ್ಟಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಗೌಡರು, ವಿಜೃಂಭಣೆಯ ದೀಪಾಲಂಕಾರವನ್ನು ಹಿಂದೆ ನಾನೆಂದೂ ನೋಡಿರಲಿಲ್ಲ. ಅತ್ಯದ್ಭುತವಾಗಿದೆ. ಭಕ್ತರಿಗೆ ಬೇಕಾಗುವ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕಾಗಿ ಸ್ಥಳೀಯ ಶಾಸಕರಾದ ಸ್ವರೂಪ್, ಜಿಲ್ಲಾಧಿಕಾರಿ ಮತ್ತವರ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಹಾಗೂ ದೇವಾಲಯದ ಆಡಳಿತ ಮಂಡಳಿಗೂ ಅಭಿನಂದನೆ ಹೇಳಿದರು.
ಉತ್ಸವ ಯಶಸ್ವಿಯಾಗಲಿದೆ, ದೇವಿಯ ಅನುಗ್ರಹ ಎಲ್ಲರಿಗೂ ಸಿಗಲಿ ಎಂದು ಆಶಿಸಿದರು. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬೆಳಗ್ಗೆಯೇ ಬಂದು ದೇವಿಯ ದರ್ಶನ ಪಡೆದರು.
ಕುಟುಂಬ ಸಮೇತರಾಗಿ ದೇವಿಯ ದರ್ಶನ ಪಡೆದು ನಂತರ ಮಾತನಾಡಿದ ಮಾಜಿ ಸಚಿವ ಕೆ.ಗೋಪಾಲಯ್ಯ, ಹಿಂದೆ ಮೂರು ವರ್ಷ ಹಾಸನಾಂಬೆ ದರ್ಶನ ಮಾಡುವ ಸೌಭಾಗ್ಯ ಸಿಕ್ಕಿತ್ತು. ದೇವಿ ಆಶೀರ್ವಾದದಿಂದ ಮತ್ತೊಮ್ಮೆ ಶಾಸಕ ಆಗಿದ್ದೇನೆ. ಸರ್ಕಾರ ಬದಲಾದರೂ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ನಂಬಿರುವ ಜನರಿಗೆ ಫಲ ಕೊಡುವ ಪವಿತ್ರ ದೇವಾಲಯ ಇದು. ತಾಯಿ ಹಾಸನಾಂಬೆ ಬರ ನಿವಾರಿಸಿ ಮಳೆ ಬರುವಂತೆ ಮಾಡಲಿ, ರಾಜ್ಯ ಸಮೃದ್ಧವಾಗಲಿ ಎಂದು ಬೇಡಿದರು. ಪತ್ರಿವರ್ಷದಂತೆ ಈ ಬಾರಿಯೂ ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗಿದೆ ಎಂದು ಅಭಿನಂದಿಸಿದರು. 

ಇಂದು ಬೆಳಗ್ಗೆಯಿಂದ ಸಂಜೆ ೬ ಗಂಟೆವರೆಗೆ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ನೈವೇದ್ಯ ಹಾಗೂ ದೇವಿಯ ಅಲಂಕಾರಕ್ಕೆ ಅವಕಾಶ ನೀಡಲಾಗಿದೆ. ನಾಳೆ ಬೆಳಗ್ಗೆಯಿಂದ ನಿರಂತರ ದರ್ಶನ ಇರಲಿದೆ. ದಿನದಲ್ಲಿ ಎರಡು ಬಾರಿ ನೈವೇದ್ಯಕ್ಕೆ ಬಿಟ್ಟರೆ ಉಳಿದೆಲ್ಲಾ ಸಮಯದಲ್ಲಿ ದೇವಿಯ ದರ್ಶನ ಮಾಡಬಹುದಾಗಿದೆ.
ಕ್ಯೂನಲ್ಲಿ ನಿಂತ ಜನರಿಗೆ ಕುಡಿಯುವ ನೀರು, ಮಜ್ಜಿಗೆ ಸೇರಿದಂತೆ ಎಲ್ಲಾ ಸೌಲಭ್ಯವನ್ನ ಜಿಲ್ಲಾಡಳಿತ ಒದಗಿಸುತ್ತಿದೆ.
ಹೆಲಿ ಟೂರಿಸಂಗೆ ಚಾಲನೆ:
ಇದೇ ವೇಳೆ ಹಾಸನಾಂಬೆ ದರ್ಶನೋತ್ಸವ ಸಂದರ್ಭದಲ್ಲಿ ಮನರಂಜನೆಗಾಗಿ ಆಗಸದಿಂದ ಹಾಸನ ಹೆಸರಿನಲ್ಲಿ ಹೆಲಿ ಟೂರಿಸಂ ಆರಂಭಿಸಲಾಗಿದ್ದು, ಅದಕ್ಕೆ ಡಿಸಿ ಇಂದು ಚಾಲನೆ ನೀಡಿದರು. ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸೋ ಮೂಲಕ ಕಾರ್ಯಕ್ರಮಕ್ಕೆ ಸತ್ಯಭಾಮ ಚಾಲನೆ ನೀಡಿದರು. ಒಬ್ಬರಿಗೆ ಒಂದು ಸುತ್ತಿಗೆ ೪೩೦೦ ದರ ನಿಗದಿ ಪಡಿಸಲಾಗಿದೆ. ನಗರದ ಮೇಲೆ ೬-೭ ನಿಮಿಷ ಸುತ್ತಾಡಿ ಆಗಸದಿಂದ ಹಾಸನ ನೋಡಬಹುದಾಗಿದೆ. ಇದೇ ಮೊದಲ ಬಾರಿಗೆ ಹಾಸನಾಂಬೆ ಉತ್ಸವದಂದು ಹೆಲಿ ಟೂರಿಸಂ ವ್ಯವಸ್ಥೆ ಮಾಡಲಾಗಿದೆ.