ಹಾಸನ: ನಾಳೆಯಿಂದ ನೆಫೆಡ್ ಹಾಗೂ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಲಗಳು ಎಪಿಎಂಸಿಗಳ ಮೂಲ ಉಂಡೆ ಕೊಬ್ಬರಿ ಖರೀದಿ ಆರಂಭಿಸುವ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣದಲ್ಲಿ ಹೆಸರು ನೋಂದಾಯಿಸಲು ರೈತರು ಇಂದಿನಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಸೋಮವಾರ ಬೆಳಗ್ಗೆ 6 ಗಂಟೆಗೆ ಕೊಬ್ಬರಿ ಖರೀದಿ ನೋಂದಣಿ ಆರಂಭದ ಬಗ್ಗೆ ಮಾಹಿತಿ ಪ್ರಕರವಾಗುತ್ತಿದ್ದಂತೆ ಹೆಸರು ನೋಂದಾಯಿಸಲು ರೈತರು ಚನ್ನರಾಯಪಟ್ಟಣದ ವ್ಯವಸಾಯ ಸೇವಾ ಮಾರಾಟ ಕೇಂದ್ರದ ಎದುರು ಮುಗಿಬಿದ್ದಿದ್ದಾರೆ.
ಭಾನುವಾರ 10 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತರು. ಗಂಟೆಗಳ ಕಾಲ ಕಾದು ಸುಸ್ತಾದ ಅವರು ನಂತರ ತಾವು ನಿಂತಿದ್ದ ಸ್ಥಳಕ್ಕೆ ಕಲ್ಲುಗಳನ್ನಿರಿಸಿ ಕಲ್ಲುಗಳ ಸಾಲು ನಿರ್ಮಿಸಿದರು. ಕಲ್ಲಿನ ಮೇಲೆ ನಂಬರ್ ಬರೆದು ಅಯಾ ಸಂಖ್ಯೆಯ ಟೋಕನ್ ರೈತರಿಗೆ ನೀಡಲಾಗಿದೆ.
ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವ ಹಿನ್ನೆಲೆಯಲ್ಲಿ ನಗರ ಠಾಣೆ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.