ಹಾಸನ: ಜಿಲ್ಲೆಯಲ್ಲಿ ಈಗಲೂ ಕಾಟ ಕೊಡುತ್ತಿರುವ ಕಾಡಾನೆ,ಚಿರತೆ, ಕರಡಿ, ಹುಲಿ ಜೊತೆಗೆ ಇದೀಗ ಕಾಡು ಹಂದಿ ಸೇರ್ಪಡೆಯಾಗಿದೆ.
ಜಮೀನು ಬಳಿ ಫಸಲಿಗೆ ನೀರು ಹಾಯಿಸುತ್ತಿದ್ದ, ಹೊಳೆನರಸೀಪುರ ತಾಲ್ಲೂಕಿನ, ಹಾರಗೌಡನಹಳ್ಳಿ ಗ್ರಾಮದ ರೈತ ಕುಟುಂಬದ ಮೇಲೆ ಕಾಡು ಹಂದಿ ಏಕಾಏಕಿ ದಾಳಿ ಮಾಡಿದ ಪರಿಣಾಮ, ರೈತ ರಾಜೇಗೌಡ(೬೩) ಎಂಬುವರು ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದಾರೆ.
ಘಟನೆಯಲ್ಲಿ ಇವರೊಂದಿಗಿದ್ದ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಅಮಾಯಕ ರೈತನನ್ನ ಬಲಿ ಪಡೆದ ಕಾಡು ಹಂದಿನ್ನು ಅಟ್ಟಾಡಿಸಿ ಹೊಡೆದು ಸಾಯಿಸಿದ್ದಾರೆ.

ನಡೆದಿದ್ದೇನು?:
ರಾಜೇಗೌಡ, ಶಾಂತಮ್ಮ ಹಾಗೂ ನಂಜಮ್ಮ ಎಂಬ ಮಹಿಳೆಯರು ಜಮೀನಿನಲ್ಲಿ ಬೆಳೆದಿರುವ ವಿವಿಧ ಬೆಳೆಗೆ ನೀರು ಹಾಯಿಸುತ್ತಿದ್ದಾಗ ಏಕಾಏಕಿ ಕಾಡು ಹಂದಿ ದಾಳಿ ಮಾಡಿದೆ.
ನೋಡ ನೋಡುತ್ತಿದ್ದಂತೆಯೇ ರಾಜೇಗೌಡ ಅವರ ಮೇಲೆರಗಿದ ಕಾಡು ಹಂದಿ ಧರಿಸಿದ್ದ ಬಟ್ಟೆ ಹರಿದು ಎಲ್ಲೆಂದರಲ್ಲಿ ತನ್ನ ಬಲಿಷ್ಠ ಮೂಗು ಹಾಗೂ ಕೋರೆಯಾಕಾರದ ದಾಡಿಯಿಂದ ದೇಹದ ವಿವಿಧ ಭಾಗಗಳಿಗೆ ಮನಬದಂತೆ ತಿವಿದಿದೆ. ಗಂಭೀರ ಪೆಟ್ಟುತಿಂದ ರಾಜೇಗೌಡ ಅಲ್ಲೇ ಕೊನೆಯುಸಿರೆಳೆದರು.
ಇವರನ್ನು ಬಿಡಿಸಲು ಹೋಗಿದ್ದ ಇಬ್ಬರು ಮಹಿಳೆಯರೂ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ
ಹಿಮ್ಸ್ಗೆ ರವಾನೆ ಮಾಡಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಕಾಡಾನೆ, ಕರಡಿ, ಚಿರತೆ ನಂತರ ಇದೀಗ ಕಾಡು ಹಂದಿ
ದಾಳಿ ಶುರುವಾಗಿದೆ. ನಾವು ಇನ್ನೇನೆಲ್ಲಾ ತೊಂದರೆ ಅನುಭವಿಸಬೇಕು ಹೇಳಿ ಎಂದು ತಮ್ಮ ಆಕ್ರೋಶ ಹೊರ ಹಾಕಿದರು. ಅರಣ್ಯ ಇಲಾಖೆಯ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವರೆಗೂ ಮೃತದೇಹ ಎತ್ತಲು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸಿ ತಮ್ಮ ಸಿಟ್ಟು ಹೊರ ಹಾಕಿದರು. ನಂತರ ಮಧ್ಯೆ ಪ್ರವೇಶಿಸಿದ ಸ್ಥಳೀಯರು, ಜನರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಜನರ ಸಿಟ್ಟಿಗೆ ಹಂದಿ ಬಲಿ;
ರೈತನನ್ನು ಬಲಿ ಪಡೆದ ಹಂದಿಯನ್ನು ಸ್ಥಳೀಯರು ಅಟ್ಟಾಡಿಸಿ ಹೊಡೆದು ಸಾಯಿಸಿದ್ದಾರೆ. ಜಮೀನು ಬಳಿಯಿದ್ದಾಗ ನಡೆದ ದಾಳಿಯಲ್ಲಿ ರಾಜೇಗೌಡ ಸಾವು, ಇಬ್ಬರು ಮಹಿಳೆಯರಿಗೆ ಗಾಯ ಸುದ್ದಿ ತಿಳಿಯುತಿದ್ದಂತೆಯೇ ಎಚ್ಚೆತ್ತ ಗ್ರಾಮಸ್ಥರು, ಕಲ್ಲು, ದೊಣ್ಣೆ ಮತ್ತಿತರ ವಸ್ತುಗಳಿಂದ ಕಾಡು ಹಂದಿಗೆ ಹೊಡೆದು ಸಾಯಿಸಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಿನ್ನೆ ಮಹಿಳೆ ಪಾರು: ನಿನ್ನೆಯಷ್ಟೇ ಬೇಲೂರು ತಾಲೂಕು ನಿಟ್ಟೂರು ಗ್ರಾಮದಲ್ಲಿ ಐದಾರು ಕಾಡು ಹಂದಿ ಏಕಾಏಕಿ ದಾಳಿ ನಡೆಸಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಕಲಾ(೫೫) ಎಂಬ ಮಹಿಳೆ ಮೇಲೆ ದಾಳಿ ನಡೆಸಿ ಗಂಭಿರ ಗಾಯ ಗೊಳಿಸಿದ್ದವು. ಕೈ ಮತ್ತು ಕಾಲು ಭಾಗಗಳಿಗೆ ಪೆಟ್ಟಾಗಿದೆ. ಮಹಿಳೆ ಚೀರಾಟ ಕೇಳಿದವರು ಓಡಿ ಬಂದು ಹಂದಿಗಳನ್ನು ಓಡಿಸಿ ಮಹಿಳೆ ರಕ್ಷಣೆ ಮಾಡಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ರೈತರೊಬ್ಬರು ಬಲಿಯಾಗಿದ್ದಾರೆ.