ಹಾಸನ: ಆಲೂರು ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ಮರದ ದಿಮ್ಮಿ ಲೋಡಿಂಗ್ ಮಾಡಲು ಹೋದ ವ್ಯಕ್ತಿ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದು ಅವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಗಿರೀಶ್ (35) ವ್ಯಕ್ತಿ. ಚನ್ನಾಪುರ ಗ್ರಾಮದ ಯೋಗೇಶ್ ಎಂಬುವವರ ತೋಟಕ್ಕೆ ನಿನ್ನೆ ಮರ ತುಂಬಲು ಗುಂಡ, ಅಕ್ಷಿತ್, ಸ್ವರೂಪ್ ಎಂಬುವವರ ಜತೆ ತೆರಳಿದ್ದ ಅವರು ಮರದಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಆಲೂರು ಆಸ್ಪತ್ರೆಗೆ ಶವ ತಂದು ಮಾಹಿತಿ ನೀಡಿದ್ದರು.
ನಂತರ ಗಿರೀಶ್ ಸ್ನೇಹಿತ ಬಿನೀತ್ ಎಂಬುವವರಿಗೆ ಕರೆ ಮಾಡಿದ ಸ್ವರೂಪ್, ಗಿರೀಶ್ ಸಾವನ್ನಪ್ಪಿದ್ದಾನೆ ಶವ ಆಸ್ಪತ್ರೆಯಲ್ಲಿ ಇದೆ ಎಂದು ತಿಳಿಸಿದ್ದರು.
ಗಿರೀಶ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಪತ್ನಿ ಹಾಗೂ ಪೋಷಕರು, ತಲೆಗೆ ಮಾತ್ರ ಗಾಯವಾಗಿದೆ ದೇಹದ ಮತ್ಯಾವ ಭಾಗಕ್ಕೂ ಪೆಟ್ಟಾಗಿಲ್ಲ. ಹೀಗಾಗಿ ಅವರನ್ನು ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿ ಆಲೂರು ಠಾಣೆಗೆ ದೂರು ನೀಡಿದ್ದಾರೆ.