ತುಮಕೂರು: ಕೆಲ ತಿಂಗಳ ಹಿಂದಷ್ಟೇ ಟೊಮ್ಯಾಟೊ ಬೆಳೆದು ಕೋಟ್ಯಧೀಶರಾದವರ ಯಶಸ್ಸಿನ ಕತೆಗಳೇ ಕಾಣುತ್ತಿದ್ದ ಬೆಳೆಗಾರರ ಹಿತಕರ ವಾತಾವರಣ ದಿಢೀರ್ ಕೊನೆಗೊಂಡಿದ್ದು, ಟೊಮ್ಯಾಟೊ ಬೆಳೆದ ತಪ್ಪಿಗಾಗಿ ರೈತ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಾವಗಡ ತಾಲ್ಲೂಕಿನ ಪಿ.ರೊಪ್ಪ ಗ್ರಾಮದ ಮನು(27) ಹಾಗೂ ಪವಿತ್ರ(24) ಮೃತ ದಂಪತಿ. ಆತ್ಮಹತ್ಯೆಗೆ ಟೊಮ್ಯಾಟೊ ಬೆಳೆನಷ್ಟ ಹಾಗೂ ಸಾಲಬಾಧೆ ಕಾರಣ ಎನ್ನಲಾಗಿದೆ. ತಾಲ್ಲೂಕಿನ ಪಾಲಕುಂಟೆಯ ಪವಿತ್ರ ಮತ್ತು ಮನು ಅವರ ವಿವಾಹ ಮೂರು ವರ್ಷಗಳ ಹಿಂದೆ ನಡೆದಿತ್ತು. ಮೃತರಿಗೆ ಸುಮಾರು ಎರಡು ವರ್ಷದ ಹೆಣ್ಣು ಮಗು ಇದೆ. ಮಗುವನ್ನು ಪವಿತ್ರ ಅವರ ತವರು ಮನೆಯಲ್ಲಿ ಬಿಡಲಾಗಿತ್ತು.
ವೇಲ್ ನಿಂದ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರ ಬೆಳಗ್ಗೆ ಮನೆಯ ಬಾಗಿಲು ತೆರೆಯದಿದ್ದಾಗ ನೆರೆಹೊರೆಯವರು ಅನುಮಾನಗೊಂಡು ಕಿಟಕಿಯಲ್ಲಿ ಇಣುಕಿ ನೋಡಿದಾಗ ನೇತಾಡುತ್ತಿದ್ದ ಮೃತದೇಹಗಳು ಕಂಡು ಬಂದಿವೆ.
ಪಾವಗಡ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಾಭದ ಆಸೆ ಹುಸಿ: ಕಳೆದ ಕೆಳ ತಿಂಗಳ ಹಿಂದೆ ಟೊಮ್ಯಾಟೊ ಬೆಳೆಗೆ ಉತ್ತಮವಾದ ಬೆಲೆ ಇತ್ತು. ಈ ಹಿನ್ನೆಲೆಯಲ್ಲಿ ಉತ್ತಮ ಲಾಭದ ನಿರೀಕ್ಷೆಯಿಂದ ದಂಪತಿಗಳು ತಮ್ಮ ಜಮೀನಿನಲ್ಲಿ ಟೊಮ್ಯಾಟೊ ಬೆಳೆದಿದ್ದರು. ಆದರೆ ಟೊಮ್ಯಾಟೊ ಬೆಲೆ ಕುಸಿತವಾಗಿ ದಂಪತಿಗಳು ನಷ್ಟ ಅನುಭವಿಸಿದ್ದರು ಎನ್ನಲಾಗಿದೆ.