ಮಂಡ್ಯ ಇಂಡಿಯಾದೊಳಗಿದೆ ಹೊರತು ಪಾಕಿಸ್ತಾನದಲ್ಲಿ ಅಲ್ಲ: ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಟಿ.ರವಿ

ನೋ ಡೌಟ್ 40% ಅಂಡ್ ಎಬೋ, ಇನ್ನೇನು ಸಾಕ್ಷಿ ಬೇಕು? ಈ ರಾಜ್ಯದಲ್ಲಿ ಮಾಜಿಸಚಿವರೇ ಹೇಳಿದ ಮೇಲೆ, ಇನ್ನೇನು ಬೇಕು?

ಹಾಸನ: ಬಿಜೆಪಿ-ಜೆಡಿಎಸ್ ಮಂಡ್ಯವನ್ನು ಮಂಗಳೂರು ಮಾಡಲು ಆಗಲ್ಲ ಎಂಬ ಸಚಿವ ಚೆಲುವರಾಯಸ್ವಾಮಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವ ಸಿ.ಟಿ.ರವಿ, ಮಂಡ್ಯನಾ ಯಾರೂ ಮಂಗಳೂರು ಮಾಡಲ್ಲ, ಮಂಡ್ಯ ಇಂಡಿಯಾದೊಳಗೆ ಇದೆ ಹೊರತು ಪಾಕಿಸ್ತಾನದೊಳಗೆ ಇಲ್ಲ ಎನ್ನುವುದನ್ನು ಅವರು ನೆನಪಿಟ್ಟುಕೊಳ್ಳಲಿ ಎಂದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ರಾಜಕಾರಣ ನಡೆಯುತ್ತೆ ಅಂತ ಜನ ತೀರ್ಮಾನ ಮಾಡ್ತಾರೆ. ರಾಷ್ಟ್ರ ಧ್ವಜ ಸರ್ವಮಾನ್ಯ ಅದು ಎತ್ತರಕ್ಕಿಂತ ಎತ್ತದಲ್ಲಿರಬೇಕು.

ಹನುಮಧ್ವಜ ತೆಗೆದು ರಾಷ್ಟ್ರ ಧ್ವಜ ಹಾರಿಸಬೇಕಿತ್ತಾ?ಇನ್ನೊಂದು ಧ್ವಜಸ್ತಂಭವನ್ನು ನೆಟ್ಟು ಹನುಮಧ್ವಜಕ್ಕಿಂತ ಎತ್ತರದಲ್ಲಿ ಹಾರಿಸಬೇಕಿತ್ತು. ಒಡೆದಾಳುವ ರಾಜಕಾರಣ ಭಾಗವಾಗಿಯೇ ಹನುಮಧ್ವಜ ವಿರುದ್ಧ ರಾಷ್ಟ್ರಧ್ವಜ ಎತ್ತಿ ಕಟ್ಟಿದ್ರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಂಡ್ಯ ಮಂಡ್ಯನೇ, ಮಂಡ್ಯದಲ್ಲಿರುವ ಹನುಮ ಭಕ್ತರು ಯಾರಿಗೂ ತಲೆ ತಗ್ಗಿಸಲ್ಲ, ತಲೆ ಎತ್ತಿಕೊಂಡು ಓಡಾಡುವವರು. ಹನುಮನಿಗೋಸ್ಕರ ಜೀವ ಕೊಡಲು ತಯಾರಾಗಿರುವವರು. ಮಂಡ್ಯವನ್ನು ಇನ್ನೇನೋ ಮಾಡ್ತಿವಿ ಅಂತ ಹೊರಡಬೇಡಿ ಎಂದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿಸಚಿವ ಬಿ.ಶಿವರಾಂ 40% ಕಮಿಷನ್ ಆರೋಪ ಪ್ರಸ್ತಾಪಿಸಿದ ಅವರು, ನೋ ಡೌಟ್ 40% ಅಂಡ್ ಎಬೋ, ಇನ್ನೇನು ಸಾಕ್ಷಿ ಬೇಕು?
ಈ ರಾಜ್ಯದಲ್ಲಿ ಮಾಜಿಸಚಿವರೇ ಹೇಳಿದ ಮೇಲೆ, ಇನ್ನೇನು ಬೇಕು? ಎಂದು ಪ್ರಶ್ನಿಸಿದರು.

ಮುಂಚೆ ಸಿದ್ದರಾಮಯ್ಯ ಕದ್ದುಮುಚ್ಚಿ ಮಾಡೋರು. ಡಿನೋಟಿಫಿಕೇಷನ್ ಅನ್ನುವ ಪದ ಬಳಸಿದ್ರೆ ಜನಕ್ಕೆ ಗೊತ್ತಾಗುತ್ತೆ ಅಂತ ರೀಡೂ ಅನ್ನುವ ಪದ ಬಳಸಿದ್ರು. ಈಗ ಯಾವ ಮುಲಾಜಿಲ್ಲ, ಭಂಡತನ, ಎಲ್ಲಾ ಅಂಗಡಿ ಬಾಗಿಲು ತೆರೆದುಕೊಂಡು ಕುಳಿತಿದ್ದಾರೆ. ಅಂಗಡಿ ಬಾಗಿಲು ಒಂದೇ ಲಾವ್ ಲಾವ್ ಲಾವ್ ( ತನ್ನಿ ತನ್ನಿ ತನ್ನಿ) ಎಂದು ಕಿಡಿಕಾರಿದರು. ವಾಸ್ತವಿಕವಾಗಿರುವುದನ್ನೇ ಶಿವರಾಂ ಹೇಳಿದ್ದಾರೆ. ಸತ್ಯ ಹೇಳಲು ಹಿಂಜರಿಯಬೇಕಿಲ್ಲ, ಸತ್ಯವನ್ನೇ ಹೇಳಿದ್ದಾರೆ ಎಂದರು.

ಮಂಡ್ಯದಲ್ಲಿ ಕುಮಾರಸ್ವಾಮಿ ಬರುತ್ತಿದ್ದಂತೆ ಪ್ರೀತಂಗೌಡ ಹಾಗೂ ನಾರಾಯಣಗೌಡ ತೆರಳಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಕುಮಾರಸ್ವಾಮಿ ಬಂದು ಸ್ವಾಗತ ಮಾಡಿದ ಮೇಲೆ ತೆರಳಿದರು. ಅನ್ಯ ಕಾರ್ಯದ ನಿಮಿತ್ತ ತೆರಳುತ್ತೀವಿ ಅಂತ ಮೊದಲೇ ಹೇಳಿದ್ರು, ಆ ಕಾರಣಕ್ಕೇ ಹೋಗಿದ್ದಾರೆ ಎಂದರು.