ನ್ಯಾಯ ಕೇಳಲು ಹೋದ ಮದ್ಯಪಾನ ಪ್ರಿಯರ ಮೇಲೆ ಅಬಕಾರಿ ಇಲಾಖೆಯಿಂದಲೇ ದೌರ್ಜನ್ಯ?

ಮದ್ಯದಂಗಡಿಗಳಲ್ಲಿ ಸ್ವಚ್ಛತೆ ಪಾಲಿಸಬೇಕು, ದರಪಟ್ಟಿ ಪ್ರದರ್ಶಿಸಬೇಕು ಎಂದು ಆಗ್ರಹಿಸಲು ಹೋಗಿದ್ದರು

ಹಾಸನ : ನಿಯಮ ಪಾಲಿಸುವಂತೆ ಆಗ್ರಹಿಸಲು ಹೋದ ಮದ್ಯಪಾನ ಪ್ರಿಯರ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳೇ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ.

ನಗರದ ಕೆಆರ್ ಪುರಂನಲ್ಲಿರುವ ಅಬಕಾರಿ ಇಲಾಖೆ ಉಪ ಆಯುಕ್ತರ ಕಚೇರಿಗೆ ತೆರಳಿದ್ದ ಮದ್ಯಪಾನ ಪ್ರಿಯರ ಸಂಘದ ರಾಜ್ಯ ಘಟಕದ ಪದಾಧಿಕಾರಿಗಳ ಮೇಲೆ ಕಚೇರಿ ನೌಕರರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಹಿಂದೆ ಹಾಸನ ಜಿಲ್ಲೆಯ ಎಲ್ಲ ಮದ್ಯದಂಗಡಿಗಳಲ್ಲಿ ಸ್ವಚ್ಛತೆ ಪಾಲಿಸಬೇಕು, ಎಲ್ಲ ಬ್ರಾಂಡ್ ಮದ್ಯಗಳ ಗರಿಷ್ಠ ಮಾರಾಟ ದರವನ್ನು ಪ್ರದರ್ಶಿಸುವ ಫಲಕಗಳನ್ನು ಹಾಕಬೇಕು ಎಂದು ಆಗ್ರಹಿಸಿ ಮದ್ಯಪಾನ ಪ್ರಿಯರ ಸಂಘದಿಂದ ಮನವಿ ನೀಡಲಾಗಿತ್ತು.

ಅದಕ್ಕೆ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ರಾಜ್ಯ ಘಟಕದ ಪದಾಧಿಕಾರಿಗಳು ನಗರಕ್ಕೆ ಬಂದು ಅಬಕಾರಿ ಉಪ ಆಯುಕ್ತರನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಆಗ ವಾಗ್ವಾದ ನಡೆದಿದ್ದು, ಮದ್ಯಪಾನ ಪ್ರಿಯರ ಸಂಘದ ಪದಾಧಿಕಾರಿಗಳನ್ನು ಅಧಿಕಾರಿಗಳನ್ನು ನಿಂದಿಸಿ ಆಚೆ ಕಳಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಬಡಾವಣೆ ಠಾಣೆಗೆ ದೂರು ನೀಡಿರುವ ಮದ್ಯಪಾನ ಪ್ರಿಯರ ಸಂಘದ ಪದಾಧಿಕಾರಿಗಳು ತಮ್ಮ‌‌ ಮೇಲೆ ಅಬಕಾರಿ ಡಿಸಿ ಕಚೇರಿ ಸಿಬ್ಬಂದಿ ದೌರ್ಜನ್ಯ ಎಸಗಿದ್ದಾರೆ.ಕಚೇರಿ ಸಿಸಿ ಟಿವಿ ದೃಶ್ಯ ಗಳನ್ನು ಪರಿಶೀಲಿಸಿದರೆ ಸತ್ಯ ಗೊತ್ತಾಗುತ್ತದೆ. ತಮ್ಮ ಮೇಲೆ ದೌರ್ಜನ್ಯ ನಡೆಸಿದವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಅಬಕಾರಿ ಡಿಸಿ ಕಚೇರಿ ಸಿಬ್ಬಂದಿ ಸಹ ದೂರು ನೀಡಿದ್ದು, ಮದ್ಯಪಾನ ಪ್ರಿಯರ ಸಂಘದ ಪದಾಧಿಕಾರಿಗಳು ಕಚೇರಿಗೆ ಬಂದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರು, ಪ್ರತಿದೂರು ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.