ಅವರ ಯಜಮಾನರನ್ನು ಕೂರಿಸಿಕೊಂಡು ಸಭೆ ಮಾಡಲಿ; ಹಾಸನಾಂಬ ಜಾತ್ರೆ ಪೂರ್ವಭಾವಿ ಸಭೆಗೆ ಆಹ್ವಾನಿಸದ ಡಿಸಿ ಮೇಲೆ ರೇವಣ್ಣ ಗರಂ!

ನನಗೆ ದೇವರು, ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ.

ಹಾಸನ: ಹಾಸನಾಂಬ ದರ್ಶನೋತ್ಸವದ ಪೂರ್ವಭಾವಿ ಸಭೆಗೆ ತಮ್ಮನ್ನು ಆಹ್ವಾನಿಸದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ಹಾಸನಾಂಬ ಜಾತ್ರಾಅವರ ಯಜಮಾನರನ್ನು ಕೂರಿಸಿಕೊಂಡು ಸಭೆ ಮಾಡಲಿ ಎಂದು ಕಿಡಿಕಾರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಾಸನಾಂಬ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಗೆ ನನ್ನನ್ನು ಆಹ್ವಾನಿಸಿಲ್ಲ ಎಂದು ಗರಂ ಆದರು. ಪುಣ್ಯಕೋಟಿ ಕಥೆ ಹೇಳುವವರು  ಅವರ ಯಜಮಾನರನ್ನು ಕೂರಿಸಿಕೊಂಡು ಪೂಜೆ ಮಾಡಲಿ ಎಂದು ವ್ಯಂಗ್ಯವಾಡಿದರು.

ನಮ್ಮ ಜಿಲ್ಲೆಯ ಬೆಳವಣಿಗೆಯನ್ನು ಕೊಲ್ಲಲು ಹೋಗಬೇಡಿ. ದ್ವೇಷದ ರಾಜಕಾರಣ ಮಾಡಬೇಡಿ. ನೀವು ಅಭಿವೃದ್ಧಿ ಮಾಡದಿದ್ದರೆ ಮುಂದೆ ನಾನು ಬರಬಹುದು, ಸ್ವರೂಪ್ ಬರಬಹುದು ನಾವು ಮಾಡುತ್ತೇವೆ ಎಂದರು.

ಮೂರು ತಿಂಗಳಿನಿಂದ ನಾನು ನೋಡುತ್ತಿದ್ದೇನೆ. ಕಾಂಗ್ರೆಸ್ ಹಿಂದೆ ಐದು ವರ್ಷ ಅಧಿಕಾರದಲ್ಲಿದ್ದಾಗ ಜಿಲ್ಲೆ ಅಭಿವೃದ್ಧಿ ಆಗಿರಲಿಲ್ಲ.

ಚುನಾವಣೆ ವೇಳೆ ಗ್ಯಾರೆಂಟಿ ಕೊಡ್ತಿವಿ ಎಂದಿದ್ದಾರೆ. ಶಾಸಕರಿಗೆ ಮೂರು ತಿಂಗಳಲ್ಲಿ ತಲಾ ಎರಡು ಕೋಟಿ ರೂ. ಅನುದಾನ ಕೊಡ್ತಿನಿ ಅಂತ ಹೇಳವ್ರೆ ಎಂದರು.

ರೇವಣ್ಣ ಕುಟುಂಬ ಮುಗಿಸಲು ಹೊರಟಿದ್ದಾರೆ ಎಂಬ ಕೇಂದ್ರಸಚಿವ ಎಚ್.ಡಿ‌.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನಗೆ ದೇವರು, ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ವಿಧಾನಸಭೆಯಲ್ಲಿ ಏನೇನು ನಡೆದಿದೆ ಎನ್ನುವುದನ್ನು ಹೇಳುತ್ತೇನೆ. ವಿಧಾನಸಭೆ ನನಗೆ ದೇವಾಲಯ ಇದ್ದಂತೆ ಎಲ್ಲವನ್ನೂ ಅಲ್ಲೇ ಹೇಳುತ್ತೇನೆ ಎಂದರು.

ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲ್ತಾರೆ ಅಂದಿದ್ದರು. ಕುಮಾರಸ್ವಾಮಿ ಎರಡು ಲಕ್ಷದ ಎಂಬತ್ತೈದು ಸಾವಿರ ಮತಗಳ ಅಂತರದಿಂದ ಗೆದ್ದರು. ಡಾ.ಮಂಜುನಾಥ್ ಹೆಚ್ಚು ಮತಗಳಿಂದ ಗೆಲ್ಲಲಿಲ್ಲವಾ? ವೈದ್ಯ ವೃತ್ತಿಯಿಂದ ಇಳಿದ ಮೂರು ತಿಂಗಳಿನಲ್ಲಿ ಎಂಪಿ ಆಗಲಿಲ್ಲವಾ? ಕುಮಾರಸ್ವಾಮಿ ಕೇಂದ್ರ ಸಚಿವರಾಗುತ್ತಾರೆ ಎಂದು ಯಾರಾದರೂ ಅಂದುಕೊಂಡಿದ್ರಾ? ಅದೆಲ್ಲಾ ದೇವರ ಆಶೀರ್ವಾದ. ಇನ್ನು ಮುಂದೆ ರಾಜಕೀಯದಲ್ಲಿ ಸಕ್ರಿಯವಾಗಿ ಇರುತ್ತೇನೆ ಎಂದರು.