ಕುತ್ಕೊಳ್ಳಿ ಸಾರ್ ಅಂದ್ರು ಶಿವಲಿಂಗೇಗೌಡ್ರು; ಕೇಳಿಸಿಯೇ ಇಲ್ಲದವರಂತೆ ಸಭೆಯಿಂದ ಎದ್ದುಹೋದ್ರು ಬಿ.ಶಿವರಾಮು

ಹಾಸನ: ಜಿಲ್ಲಾ ಕಾಂಗ್ರೆಸ್‌ನಲ್ಲಿ ಇನ್ನೂ ಭಿನ್ನಮತ ಶಮನವಾದಂತೆ ಕಾಣುತ್ತಿಲ್ಲ. ತಮ್ಮನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಮಾಜಿ ಸಚಿವ ಬಿ.ಶಿವರಾಮು ಭಾನುವಾರ ಕೂಡ ಪಕ್ಷದ ಸಭೆಯಿಂದ ಅರ್ಧದಲ್ಲೇ ಹೊರ ನಡೆದರು.

ಮಾ.1 ರಂದು ಹಾಸನ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅಧ್ಯಕ್ಷತೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳ ಪರಾಜಿತ ಅಭ್ಯರ್ಥಿಗಳು, ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಮುಖಂಡರ ಸಭೆ ಕರೆಯಲಾಗಿತ್ತು.

ನಿಗಮ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಮಾಜಿ ಸಚಿವ ಬಿ.ಶಿವರಾಮು ಹಾಗೂ ಪರಾಜಿತ ಅಭ್ಯರ್ಥಿಗಳು ಹಾಗೂ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.

ಒಂದೊಂದೇ ವಿಧಾನಸಭಾ ಕ್ಷೇತ್ರದವರನ್ನು ಕರೆದು ಸಚಿವರು ಪ್ರತ್ಯೇಕವಾಗಿ ಸಭೆ ನಡೆಸಿ ಜವಾಬ್ದಾರಿಗಳನ್ನು ನೀಡುತ್ತಿದ್ದರು. ಮೊದಲು ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದರು. ಈ ವೇಳೆ ಮಾಜಿಸಚಿವ ಬಿ.ಶಿವರಾಮು ಕೂಡ ಹಾಜರಿದ್ದರು.

ಇದಾದ ಬಳಿಕ ಸಕಲೇಶಪುರ ವಿಧಾನಸಭಾ ಕ್ಷೇತ್ರದವರು ಬನ್ನಿ ಎಂದು ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಕರೆಯುತ್ತಿದ್ದಂತೆ ಮಾಜಿಸಚಿವ ಬಿ.ಶಿವರಾಮು ಸಭೆಯಿಂದ ಎದ್ದು ಹೊರಟರು.‌

ಬಿ.ಶಿವರಾಮು ಮೇಲೆಳುತ್ತಿದ್ದಂತೆ ಕುಳಿತುಕೊಳ್ಳಿ ಸರ್ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಮನವಿ ಮಾಡಿದರು. ಶಾಸಕರ ಮಾತಿಗೂ ಕಿವಿಗೊಡದೆ ಬಿ.ಶಿವರಾಮು ಹೊರನಡೆದರು.

ಇತ್ತೀಚೆಗೆ ಕಾಂಗ್ರೆಸ್‌ನಲ್ಲಿ ನಡೆದ ಬೆಳವಣಿಗೆಗಳು ಹಾಗೂ ತಮ್ಮನ್ನು ನಿರ್ಲಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಾಜಿ ಸಚಿವರಾದರೂ ಬೇಲೂರು ಕ್ಷೇತ್ರದ ಚರ್ಚೆಗೆ ತಮ್ಮನ್ನು ಸೀಮಿತಗೊಳಿಸಿಕೊಂಡು ಹೊರ ಹೋದರು ಎನ್ನಲಾಗುತ್ತಿದೆ.