ಅರಸೀಕೆರೆ ಕ್ಷೇತ್ರದಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡದಿರುವುದೇ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ; ಶಿವಲಿಂಗೇಗೌಡ ವಿರುದ್ಧ ಸಿಡಿದ ಬಿ.ಶಿವರಾಮು!

ಹಾಸನ: ಕಳೆದ ವಿಧಾನಸಭೆ ಚುನಾವಣೆ ವೇಳೆ ಅರಸೀಕೆರೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಕೊಡದೆ ಇರುವುದೇ ಇತರ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಮಾಜಿ ಸಚಿವ ಬಿ. ಶಿವರಾಂ ಆರೋಪಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂತ್ರಿ ಆಗ್ಬೇಕು, ನಿಗಮ ಮಂಡಳಿ ಅಧ್ಯಕ್ಷ ಆಗ್ಬೇಕು ಅನ್ನೋರು ಅರಸೀಕೆರೆ ಬಿಟ್ಟು ಬೇರೆ ತಾಲ್ಲೂಕುಗಳಿಗೆ ಪ್ರವಾಸ ಮಾಡಿ ಕಾರ್ಯಕರ್ತರ ವಿಶ್ವಾಸ ಗಳಿಸಬೇಕಲ್ವಾ ಎಂದು ಶಾಸಕ ಕೆ.ಎಂ‌.ಶಿವಲಿಂಗೇಗೌಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅರಸೀಕೆರೆ ಬಿಟ್ಟು ಬೇರೆ ಎಲ್ಲಿ ಬಂದಿದ್ದಾರೆ. ಅಧ್ಯಕ್ಷರಾಗಬೇಕು ಮಂತ್ರಿ ಆಗಬೇಕು ಅಷ್ಟೇ ಅಂದ್ರೆ ಹೆಂಗೆ. ಬೇರೆ ತಾಲ್ಲೂಕುಗಳಿಗೂ ಹೋಗ್ಬೇಕು. ಉನ್ನತ ಸ್ಥಾನಗಳಿಗೆ ಯಾರನ್ನಾದರೂ ಆಯ್ಕೆ ಮಾಡಿದ್ರೆ ಆಗುತ್ತಾ ಎಂದು ಟಾಂಗ್ ನೀಡಿದರು.

ಲೋಕಸಭಾ ಚುನಾವಣೆ ಬರುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಅಭಿಪ್ರಾಯ 28 ಕ್ಷೇತ್ರ ಗೆಲ್ಲಬೇಕು ಎಂಬುದಾಗಿದೆ. ಗೆಲುವಿಗೆ ಏನೂ ಮಾಡಬೇಕು ಅದನ್ನು ಮಾಡುತ್ತಿದ್ದೇವೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಶಿವಲಿಂಗೇಗೌಡರಿಗೆ ಜನಾಭಿಪ್ರಾಯ ಇದೆ ಅಂತ ಅವರ ಹೆಸರು ಹೇಳಿದ್ದೇನೆ. ಅಭ್ಯರ್ಥಿ ಆಯ್ಕೆಗೆ ಮಾರ್ಗ ಅನುಸರಿಸಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಲು ಜಾತ್ಯಾತೀತ ನೀಲುವು ತೆಗೆದುಕೊಳ್ಳದೆ ಇರುವುದು ಕಾರಣ. ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಕೊಡದೆ ಇರುವುದು ಆರು ಕ್ಷೇತ್ರಗಳ ಸೋಲಿಗೆ ಕಾರಣ. ಅರಸೀಕೆರೆ ಕ್ಷೇತ್ರದಲ್ಲಿ ಲಿಂಗಾಯತರಿಗೆ ಟಿಕೆಟ್ ಕೊಡಬೇಕಿತ್ತು. ಒಕ್ಕಲಿಗ ಸಮುದಾಯಕ್ಕೆ ಕೊಟ್ಡಿದ್ದರಿಂದ ಅರಸೀಕೆರೆಯಲ್ಲಿ ಮಾತ್ರ ಗೆದ್ದು ಬೇರೆ ಕಡೆ ಸೋಲಬೇಕಾಯಿತು.

ಪ್ರಬಲ ಆಕಾಂಕ್ಷಿ ಆಗಿದ್ದ ಶಶಿಧರ್ ಅವರಿಗೆ ಟಿಕೆಟ್ ತಪ್ಪಿಸಿ ಸರ್ಕಾರ ಬಂದರೆ ನಿಗಮ ಮಂಡಳಿ ಸ್ಥಾನ ಕೊಡುತ್ತೇವೆ ಅಂತ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಇಬ್ಬರೂ ಹೇಳಿದ್ದರು. ಆದ್ರೆ ಇಲ್ಲಿ ತನಕ ನೀಡಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಂಡರೆ ಮಾತ್ರ ಜನರು ನಮ್ಮನ್ನು ನಂಬುತ್ತಾರೆ.

ಹಿಂದುಳಿದ ವರ್ಗ ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅವರಿಗೂ ಸ್ಥಾನಮಾನ ನೀಡಿದರೆ ಅನುಕೂಲ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಪೂರಕ ವಾತಾವರಣ ಇದೆ. ಆದ್ರೆ ಹಾಸನದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಇದನ್ನು ನಾಯಕರು ಅರ್ಥ ಮಾಡಿಕೊಳ್ಳಬೇಕು.

ನಾನು ಬೇರೆಯವರ ರೀತಿ ವಲಸೆ ಹೋಗಿಲ್ಲ. ಹೈಕಮಾಂಡ್ ತಪ್ಪಿನಿಂದ ಜೆಡಿಎಸ್ ಜೊತೆಗೆ ಹೋಗಿ ದಿಕ್ಕು ತಪ್ಪಿದ್ದೇವೆ. ಜಿಲ್ಲೆಯಲ್ಲಿ ಇರುವ ಉಸ್ತುವಾರಿ, ವೀಕ್ಷಕರು ಯಾವ ತಾಲ್ಲೂಕಿಗೂ ಭೇಟಿ ಮಾಡಿಲ್ಲ. ಎಲ್ಲೋ ಕುಳಿತ ಸ್ವಹಿತಾಸಕ್ತಿಯಿಂದ ಅಭ್ಯರ್ಥಿ ಘೋಷಿಸಿದರೆ ಚುನಾವಣೆ ಗೆಲ್ಲುವುದು ಸುಲಭವಲ್ಲ.

ಲೋಕಸಭೆಗಾಗಿ ಇರುವ ಆಕಾಂಕ್ಷಿಗಳೆಲ್ಲರೂ ಸಮರ್ಥ ಅಭ್ಯರ್ಥಿಗಳಲ್ಲ. ಸಮರ್ಥ ಅಭ್ಯರ್ಥಿ ಶಿವಲಿಂಗೇಗೌಡ ಅವರು ಜೆಡಿಎಸ್ ನಿಂದ ಬಂದವರು, ಸ್ವಸಾಮರ್ಥ್ಯದಿಂದ ಗೆದ್ದಿದ್ದೇನೆ ಅಂತಾರೆ. ನಾನು ಅವರನ್ನು ಟೀಕೆ ಮಾಡ್ತಿಲ್ಲ. ಇರೋರಲ್ಲಿ ಉತ್ತಮ ಅಂತ ಶಿವಲಿಂಗೇಗೌಡರ ಹೆಸರು ಹೇಳ್ತಿನಿ. ಬಿಜೆಪಿ-ಜೆಡಿಎಸ್ ಒಂದಾಗ್ತಿದೆ. ನಾವು ಗ್ಯಾರಂಟಿ ಮೇಲೆ ಚುನಾವಣೆ ಮಾಡಬೇಕಿದೆ. ನಾನು ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿಲ್ಲ ಎಂದರು.

ಅವರು ಹಾಗೆ ಅಂದುಕೊಳ್ಳಬಾರದು. ಕಾಂಗ್ರೆಸ್ ನವರು ಪ್ರಧಾನಿ ಆಗಬೇಕೆಂದರೆ ಒಂದೊಂದು ಸೀಟು ಮುಖ್ಯ. ಆ ಬದ್ಧತೆ ಶಿವಲಿಂಗೇಗೌಡ ಅವರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಶಿವಲಿಂಗೇಗೌಡರು ಕಾಂಗ್ರೆಸ್ ಗೆ ಬಂದು ಎಂಟು ತಿಂಗಳಾಯ್ತು, ನಾನು 47 ವರ್ಷಗಳಿಂದ ಇದ್ದೇನೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.