ಹಾಸನ ಜಿಲ್ಲೆಯಲ್ಲಿ ದಬ್ಬಾಳಿಕೆ, ಶೋಷಣೆ ಮಾಡಲು ಬಂದರೆ ಈ ಪ್ರೀತಂಗೌಡ ಬಿಡಲ್ಲ; ಮುಗಿಯದ ಮುನಿಸಿನ ಸಂದೇಶ ರವಾನಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ

ಹಾಸನ: ಬಿಜೆಪಿ-ಜೆಡಿಎಸ್ ವಿಶೇಷ ಸಮನ್ವಯ ಸಭೆ ನಡೆದರೂ ಸ್ಥಳೀಯ ಬಿಜೆಪಿ ನಾಯಕರು ಜೆಡಿಎಸ್ ವರಿಷ್ಠರ ಮರ್ಜಿಗೆ ಒಳಪಡಲು ಸಿದ್ಧವಿಲ್ಲ, ಅವರ ಪ್ರಚಾರವೇನಿದ್ದರೂ ಮೋದಿ ಪರವಷ್ಟೇ ಎನ್ನುವ ಸಂದೇಶ ಪಕ್ಷದ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರ ಸಭೆ ಮೂಲಕ ರವಾನೆಯಾಯಿತು.

ಹಾಸನದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮುಖಂಡರು ಪ್ರಜ್ವಲ್‌ ರೇವಣ್ಣ ಹೆಸರು ಹೇಳಿಲ್ಲ, ಕೇವಲ ಬಿಜೆಪಿ ನಾಯಕರ ಸೂಚನೆಯಂತೆ ಕೆಲಸ ಮಾಡಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಕರೆ ನೀಡಿದರು. ಉಳಿದವರೂ ಇದೇ ಮಾರ್ಗ ಅನುಸರಿಸಿದರು.

ಪ್ರೀತಂಗೌಡ ಮಾತನಾಡಿ, ಎನ್‌ಡಿಎ ಒಕ್ಕೂಟ ಮುನ್ನಡೆಸುತ್ತಿರುವ ನರೇಂದ್ರಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕು ಎಂದು ಎಲ್ಲರೂ ಹೋರಾಟ ಮಾಡುತ್ತಿದ್ದಾರೆ. ನರೇಂದ್ರಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ಸೂರ್ಯ, ಚಂದ್ರ ಇರುವಷ್ಟೇ ಸತ್ಯ ಎಂದರು.

ನಾವೆಲ್ಲರೂ ಯಾವುದೇ ಆತಂಕಕ್ಕೆ ಒಳಗಾಗದೆ ಕೆಲಸ ಮಾಡಬೇಕು. 1999 ರಲ್ಲಿ ನಾಲ್ಕು ಸ್ಥಾನ ಗೆದ್ದಿದ್ದವು. ರಾಜಕೀಯ ಸ್ಥಿತ್ಯಂತರದ ನಂತರ ಬಿಜೆಪಿ ಅಭ್ಯರ್ಥಿಗೆ ಡಿಪಾಸಿಟ್ ಕೂಡ ಇರ್ತಿರಲಿಲ್ಲ.

2008 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕಿತ್ತು. ರಾಜಕೀಯ ಪಲ್ಲಟದಿಂದ 110 ಸೀಟ್ ಬಂತು. ಆಗಲೂ ಕೂಡ ಜಿಲ್ಲೆಯಲ್ಲಿ ಡೆಪಾಸಿಟ್ ಸಿಗಲಿಲ್ಲ. 2018 ರಲ್ಲಿ ಬಿಜೆಪಿಯಿಂದ ನಾನು ಶಾಸಕನಾದೆ. ನಾನು ನನ್ನ ಕ್ಷೇತ್ರ ಮಾತ್ರ ನೋಡಲಿಲ್ಲ,
ಜಿಲ್ಲೆಯಲ್ಲಿ ಎಲ್ಲರ ಜೊತೆ ಪಕ್ಷ ಕಟ್ಟುವ ಕೆಲಸ ಮಾಡಿದೆ.

ಐದು ವರ್ಷದಲ್ಲಿ ಕಾಂಪ್ರಮೈಸ್ ರಾಜಕಾರಣ ಮಾಡಲಿಲ್ಲ. ಹೆದರಿಸಿದವರಿಗೆ ಹೆದರದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ವಿ. ಬಿಜೆಪಿಯಿಂದ ಅಭ್ಯರ್ಥಿಗಳೇ ಸಿಗುತ್ತಿರಲಿಲ್ಲ. ಈಗ ಇಬ್ಬರು ಶಾಸಕರು ಆಯ್ಕೆಯಾದರು. ಅದಕ್ಕೆ ನಮ್ಮ ನಡವಳಿಕೆ, ನಮ್ಮ ಹೋರಾಟ ಅವರಿಗೆ ಸ್ಪೂರ್ತಿ ಆಯ್ತು ಎಂದರು.

2023 ರಲ್ಲಿ ಯಡಿಯೂರಪ್ಪ ಅವರ ಆಶೀರ್ವಾದದಿಂದ ಇಬ್ಬರು ಶಾಸಕರು ಆಯ್ಕೆಯಾಗಿದ್ದಾರೆ. ಈ ಎರಡನ್ನು ನಾಲ್ಕು ಮಾಡಬೇಕೆಂದರೆ ಇದೇ ಸ್ವಾಭಿಮಾನ, ಹೋರಾಟ ಮುಂದುವರಿಸಿಕೊಂಡು ಹೋಗಬೇಕು.

ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್‌ನಿಂದ, ಜೆಡಿಎಸ್‌ನಿಂದ ತೊಂದರೆಯಾದರೆ ಈ ಪ್ರೀತಂಗೌಡ ಮೊದಲು ಬಂದು ನಿಲ್ತಾನೆ. ನಾವು ಮೋದಿಯವರಿಗೋಸ್ಕರ ರಾಜ್ಯ ನಾಯಕರ ಸೂಚನೆಯಂತೆ ನಡೆಯಬೇಕು.

ಹಾಸನ ಜಿಲ್ಲೆಯಲ್ಲಿ ದಬ್ಬಾಳಿಕೆ, ಶೋಷಣೆ ಮಾಡಲು ಬಂದರೆ ಈ ಪ್ರೀತಂಗೌಡ ಬಿಡಲ್ಲ. ಯಾವೆಲ್ಲಾ ಕೆಲಸ ಹೇಳ್ತಾರೆ, ಸೂಚನೆ ಕೊಡ್ತಾರೆ ಅದನ್ನು ಮಾಡೋಣ. ನಾಳೆ ಬಿ.ವೈ.ವಿಜಯೇಂದ್ರ ಅವರು ಬರ್ತಾರೆ. ಅವರಿಗೆ ಗೌರವ ಕೊಡುವ ಕೆಲಸ ಮಾಡೋಣ. ರಾಷ್ಟ್ರಮಟ್ಟದಲ್ಲಿ ಏನು ಮೈತ್ರಿ ಆಗಿದೆಯೋ ಅದರಲ್ಲಿ ಉದ್ದೇಶ ಇದೆ.

ನಾನು ಎರಡು ಮಂಡಲ ಬರುತ್ತೆ, ಅಲ್ಲೂ ಹೋಗಬೇಕು, ಇಲ್ಲಿಗೂ ಬರ್ತೇನೆ ಎಂದ ಪ್ರೀತಂ, ಸಭೆಯಲ್ಲಿ ಪ್ರಜ್ವಲ್‌ರೇವಣ್ಣ ಹೆಸರೂ ಬಳಸಲೇ ಇಲ್ಲ.