ಜನಾಂದೋಲನ ಸಮಾವೇಶ; ಹಾಸನದಲ್ಲಿ ಭಾರೀ ಟ್ರಾಫಿಕ್ ಜಾಮ್, ಕಾರ್ಯಕ್ರಮ ಸ್ಥಳ ತಲಪಲು ಸಾಧ್ಯವಾಗದೇ ಸಾವಿರಾರು ಕಾರ್ಯಕರ್ತರ ಪರದಾಟ!

ಹಾಸನ: ನಗರದ ಎಸ್.ಎಂ. ಕೃಷ್ಣನಗರದಲ್ಲಿ ಇಂದು ಆಯೋಜಿಸಿರುವ ಜನಕಲ್ಯಾಣ ಸಮಾವೇಶಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಪ್ರವಾಹವೇ ಹರಿದು ಬಂದಿದೆ.

ಆದರೆ ಸಮಾವೇಶ ಆರಂಭವಾಗಿ ಒಂದು ಗಂಟೆ ಕಳೆದರೂ, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಸಾವಿರಾರು ಜನರು ಕಾರ್ಯಕ್ರಮ ಸ್ಥಳ ತಲುಪಲು ಇನ್ನೂ ಪರದಾಡುತ್ತಿದ್ದಾರೆ.

ಸಮಾವೇಶದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹಲವು ಸಚಿವರು ಭಾಗವಹಿಸಿದ್ದು ಭಾಷಣ ಮಾಡುತ್ತಿದ್ದಾರೆ. ಹಾಸನ ಹಾಗೂ ವಿವಿಧ ಜಿಲ್ಲೆಗಳ ನೂರಾರು ಬಸ್‌ಗಳು ಮತ್ತು ಖಾಸಗಿ ವಾಹನಗಳಲ್ಲಿ ಜನರು ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ.

ಹಾಸನ ಡೇರಿ ವೃತ್ತದಿಂದ ಎಸ್.ಎಂ. ಕೃಷ್ಣನಗರದವರೆಗೂ ನಾಲ್ಕು ಕಿಲೋಮೀಟರ್‌ಗಳಷ್ಟು ಉದ್ದಕ್ಕೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಜನರು ಸಮಾವೇಶದ ಸ್ಥಳಕ್ಕೆ ತಲುಪಲು ಪರದಾಡುವ ಸ್ಥಿತಿ ಎದುರಾಗಿದ್ದು, ಐನೂರಕ್ಕೂ ಹೆಚ್ಚು ಸಾರಿಗೆ ಬಸ್‌ಗಳು ಮತ್ತು ಖಾಸಗಿ ವಾಹನಗಳು ಜಾಮ್‌ನಲ್ಲಿ ಸಿಲುಕಿವೆ.

ಸಂಚಾರವನ್ನು ಸುಗಮಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ವಾಹನಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಸ್‌ನಲ್ಲಿ ಕುಳಿತು ಸಮಯ ಕಳೆಯುತ್ತಿರುವ ಹಲವರು ಸಮಾವೇಶಕ್ಕೆ ತಲುಪುವ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ.

ಅನಿಶ್ಚಿತತೆ: ಈಗಾಗಲೇ ದಟ್ಟ ಜಾಮ್‌ಗಳ ಪರಿಣಾಮ, ಜನಕಲ್ಯಾಣ ಸಮಾವೇಶ ಮುಗಿದರೂ ಬಸ್ಗಳಲ್ಲಿರುವ ಜನರು ಸ್ಥಳಕ್ಕೆ ತಲುಪುವುದೇ ಅನುಮಾನವಾಗಿದೆ.