ರೈತರನ್ನು ನಿಯಂತ್ರಿಸಲು ಲಾಠಿ ಹಿಡಿದು ಫೀಲ್ಡಿಗಿಳಿದ ಶಾಸಕ ಕೆ.ಎಂ.ಶಿವಲಿಂಗೇಗೌಡ

ನಾಲ್ಕು ದಿನಗಳಿಂದ ರೈತರಿಗೆ ಊಟ, ನೀರಿನ ವ್ಯವಸ್ಥೆ ಕಲ್ಪಿಸಿರುವ ಶಾಸಕ ಕೆಎಂಶಿ

ಹಾಸನ: ಮಹಾಶಿವರಾತ್ರಿ ಹಬ್ಬದ ದಿನವೂ ಕೊಬ್ಬರಿ ಖರೀದಿ ಕೇಂದ್ರದಲ್ಲಿ ನೋಂದಣಿಗೆ ರೈತರು ಮುಗಿಬಿದ್ದಿದ್ದು, ನೂಕುನುಗ್ಗಲು ನಿಯಂತ್ರಿಸಲು ಶಾಸಕ ಕೆ.ಎಂ.ಶಿವಲಿಂಗೇಗೌಡರೇ ಲಾಠಿ ಹಿಡಿದು ಫೀಲ್ಡಿಗಿಳಿದಿದ್ದಾರೆ.

ಬೆಳಿಗ್ಗೆಯಿಂದಲೂ ಜಿಲ್ಲೆ ನೋಂದಣಿ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಂತ ರೈತರು ಹಾಗೂ ರೈತ ಮಹಿಳೆಯರು ದಣಿದಿದ್ದು, ನಿರೀಕ್ಷಿತ ವೇಗದಲ್ಲಿ ನೋಂದಣಿ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅರಸೀಕೆರೆ ಎಪಿಎಂಸಿ ಮುಂದೆ ನೂಕುನುಗ್ಗಲು ಉಂಟಾಗಿದ್ದು, ವಿಷಯ ತಿಳಿದು ಬೆಳಿಗ್ಗೆಯೇ ಎಪಿಎಂಸಿ ಆವರಣಕ್ಕೆ ಬಂದ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ, ಲಾಠಿ ಹಿಡಿದು ರೈತರು ಸರದಿ ಸಾಲು ಉಲ್ಲಂಘಿಸದಂತೆ ನಿಯಂತ್ರಿಸಿದರು.

ಬೆಳಿಗ್ಗೆಯಿಂದಲೂ ಎಪಿಎಂಸಿಯಲ್ಲಿರುವ ನೋಂದಣಿ ಕೇಂದ್ರದ ಬಳಿಯೇ ಕುಳಿತಿರುವ ಕೆ.ಎಂ.ಶಿವಲಿಂಗೇಗೌಡ, ಸರದಿ ಸಾಲಿನಲ್ಲಿ ನಿಂತಿರುವ ರೈತರಿಗೆ ಕುಡಿಯುವ ನೀರು, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ ಅದರ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ.

ನಾಲ್ಕು ದಿನಗಳಿಂದಲೂ ರೈತರಿಗೆ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ.
ಇಂದು ಸಂಜೆ ನೋಂದಣಿ ಕಾರ್ಯ ಮಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ನೂಕುನುಗ್ಗಲು ಹೆಚ್ಚಾಗಿದೆ.