ಇಂದು ಗುಂಪಿನಿಂದ ಬೇರ್ಪಟ್ಟ ಪುಂಡಾನೆ: ಆಪರೇಷನ್ ವಿಕ್ರಾಂತ್ ಆರಂಭ

ಹಾಸನ, ಮಾರ್ಚ್ 19: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಾನನಹಳ್ಳಿ ಅರಣ್ಯದಲ್ಲಿ ಕಾಡಾನೆ ವಿಕ್ರಾಂತ್‌ನನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯ ಆಪರೇಷನ್ ವಿಕ್ರಾಂತ್ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈಗಾಗಲೇ ವಿಕ್ರಾಂತ್ ಇರುವ ಸ್ಥಳವನ್ನು ಪತ್ತೆಹಚ್ಚಿರುವ ಇಟಿಎಫ್ (ಎಲಿಫೆಂಟ್ ಟಾಸ್ಕ್ ಫೋರ್ಸ್) ಸಿಬ್ಬಂದಿ, ಕಾರ್ಯಾಚರಣೆ ಆರಂಭಿಸಿದ್ದಾರೆ.

ಭಾನುವಾರದಿಂದ ಆರಂಭವಾದ ಈ ಕಾರ್ಯಾಚರಣೆಯಲ್ಲಿ, ಬಿಕ್ಕೋಡು ತಾತ್ಕಾಲಿಕ ಶಿಬಿರದಿಂದ ಆಗಮಿಸಿದ ಸಾಕಾನೆಗಳಾದ ಪ್ರಶಾಂತ್, ಧನಂಜಯ, ಕಂಜನ್, ಕರ್ನಾಟಕ ಭೀಮ, ಹರ್ಷ, ಏಕಲವ್ಯ ಮತ್ತು ಮಹೇಂದ್ರ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ನಿನ್ನೆ ಸತತ ಆರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ವಿಕ್ರಾಂತ್‌ಗೆ ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ವಿಫಲರಾಗಿದ್ದರು.

ಆದರೆ, ಇಂದು ಇಟಿಎಫ್ ತಂಡವು ವಿಕ್ರಾಂತ್‌ನನ್ನು ಕಾಡಾನೆಗಳ ಗುಂಪಿನಿಂದ ಬೇರ್ಪಡಿಸುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ವಿಕ್ರಾಂತ್ ಅರಣ್ಯದೊಳಗೆ ಒಂಟಿಯಾಗಿ ನಿಂತಿದ್ದು, ವೈದ್ಯರು ಸಾಕಾನೆಗಳೊಂದಿಗೆ ಕಾಡಿನೊಳಗೆ ತೆರಳಿ ಅರವಳಿಕೆ ಚುಚ್ಚುಮದ್ದು ನೀಡುವ ಪ್ರಯತ್ನದಲ್ಲಿದ್ದಾರೆ.

ಈ ಕಾರ್ಯಾಚರಣೆಯು ಸ್ಥಳೀಯ ರೈತರು ಮತ್ತು ಗ್ರಾಮಸ್ಥರಿಗೆ ಆತಂಕ ತರುತ್ತಿರುವ ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಗುರಿಯನ್ನು ಹೊಂದಿದೆ. ಈಗಾಗಲೇ ಒಂದು ಪುಂಡಾನೆಯನ್ನು ಸೆರೆಹಿಡಿದು ಸ್ಥಳಾಂತರ ಮಾಡಿರುವ ಅರಣ್ಯ ಇಲಾಖೆ, ವಿಕ್ರಾಂತ್‌ನನ್ನು ಸಹ ಸೆರೆಹಿಡಿಯುವ ತೀವ್ರ ಪ್ರಯತ್ನದಲ್ಲಿದೆ.ಈ ಕಾರ್ಯಾಚರಣೆಯ ಪ್ರಗತಿಯನ್ನು ಜನರು ಉತ್ಸುಕತೆಯಿಂದ ಗಮನಿಸುತ್ತಿದ್ದು, ಮುಂದಿನ ಕೆಲವು ಗಂಟೆಗಳಲ್ಲಿ ಯಶಸ್ಸು ಸಿಗುವ ನಿರೀಕ್ಷೆಯಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.